Sudarshana Mudra   Astanga Yoga Vijnana Mandiram Search

ಅಷ್ಟಾಂಗಯೋಗ ವಿಜ್ಞಾನಮಂದಿರಂ

(AstangaYoga VijnanaMandiram)
(ಪರಿಚಯ - Introduction)

ಅಷ್ಟಾಂಗಯೋಗ ವಿಜ್ಞಾನಮಂದಿರ


'ಅಷ್ಟಾಂಗಯೋಗ' ಎನ್ನುವ ಪದವು ಸಂಪುಟಿತವಾಗಿ 'ಜ್ಞಾನ' ಜ್ಯೋತಿಯನ್ನು ಪ್ರತಿನಿಧಿಸುತ್ತದೆ. 'ವಿಜ್ಞಾನ' ಎಂಬ ಪದವು ಆ ಜ್ಯೋತಿಯ ವಿಸ್ತಾರವನ್ನೇ ಸೂಚಿಸುವುದಾಗಿದೆ. ಹೀಗಾಗಿ 'ಅಷ್ಟಾಂಗಯೋಗ ವಿಜ್ಞಾನಮಂದಿರ'ವು 'ಜ್ಞಾನವಿಜ್ಞಾನಮಂದಿರ' ಎಂಬುದರ ಪರ್ಯಾಯಪದವಾಗಿದೆ. ಜ್ಞಾನಜ್ಯೋತಿಯಿಂದ ಹೊರಹೊಮ್ಮಿಬಂದು ಭಾರತೀಯ ಮಹರ್ಷಿಗಳಿಂದ ಲೋಕದ ಮುಂದಿರಿಸಲ್ಪಟ್ಟ ಸಮಸ್ತ ವಿದ್ಯಾ ಪ್ರಪಂಚವನ್ನೂ ಇದು ಪ್ರತಿನಿಧಿಸುವ ಧ್ಯೇಯದಿಂದ ಕೂಡಿದೆ.

ಸ್ಥಾಪನೆ


ಅಷ್ಟಾಂಗಯೋಗವಿಜ್ಞಾನಮಂದಿರವೆಂಬ ಸಂಸ್ಥೆಯು ಶ್ರೀರಂಗಮಹಾಗುರುಗಳೆಂಬ ಯೋಗಿವರೇಣ್ಯರಿಂದ 1947ರಲ್ಲಿ ರೂಪತಳೆಯಿತು. ಮೊದಲು ಅವರ ಜನ್ಮಸ್ಥಳವಾದ ನಂಜನಗೂಡಿನ ಸಮೀಪದಲ್ಲಿರುವ ಹೆಡತಲೆ ಎಂಬ ಚಿಕ್ಕಗ್ರಾಮದಲ್ಲಿದ್ದ ಅವರ ಸ್ವಗೃಹದಲ್ಲಿ ಆರಂಭಗೊಂಡಿತು. ಕ್ರಮೇಣ ಅದರ ಕೇಂದ್ರ ಕಾರ್ಯಾಲಯವು ಮೈಸೂರಿಗೆ ಸ್ಥಳಾಂತರಗೊಂಡಿತು. ಜೊತೆಗೆ, ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸಮೀಪದಲ್ಲಿರುವ ಬಸರೀಕಟ್ಟೆ ಗಳಲ್ಲಿ ಎರಡು ಶಾಖೆಗಳಾದವು.

ಮಂದಿರದಧ್ಯೇಯ


ಈ ಸಂಸ್ಥೆಯು ಆರ್ಯಭಾರತೀಯರ ಉಡಿಗೆ-ತೊಡಿಗೆ, ಆಹಾರ-ವಿಹಾರ, ನಡೆ-ನುಡಿ, ರಾಜನೀತಿ, ದೇಹದೇಶ ವಿಭಾಗ, ವಿದ್ಯೆ-ಕಲೆ ಇವುಗಳ ಒಳತತ್ತ್ವವನ್ನು ಹೊರಗೆಡಹುವ ಪ್ರಯತ್ನವನ್ನು ಪ್ರಧಾನ ಉದ್ದೇಶವನ್ನಾಗಿ ಹೊಂದಿದೆ. ಇವುಗಳೆಲ್ಲವನ್ನೂ ಕೂಡ ಸರಿಯಾದಕ್ರಮದಲ್ಲಿ ಅಳವಡಿಸಿಕೊಂಡಾಗ ಅವು ನಮ್ಮನ್ನು ಮತ್ತೆ ಅವುಗಳ ಉಗಮಸ್ಥಾನವಾದ ಪರಂಜ್ಯೋತಿಯೆಡೆಗೇ ಕರೆದೊಯ್ಯುತ್ತವೆ. ಈ ಸತ್ಯಾರ್ಥವನ್ನು ಮನವರಿಕೆ ಮಾಡಿಕೊಟ್ಟು ಮಹರ್ಷಿಸಂಸ್ಕೃತಿಯ ಪುನರುಜ್ಜೀವನವನ್ನು ಮಾಡುವುದೇ ಮಂದಿರದಧ್ಯೇಯವಾಗಿದೆ.

ಧ್ಯೇಯ ಸಾಧನೆಗಾಗಿ ಕೈಗೊಂಡಿರುವ ಕಾರ್ಯಗಳು


1. ಪ್ರಕಾಶನಗಳು

ಧ್ಯೇಯ ಸಾಧನೆಯ ನಿಟ್ಟಿನಲ್ಲಿ ಮಂದಿರದ ಪ್ರಕಾಶನಗಳು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಇವು ಋಷಿಸಂಸ್ಕೃತಿಯ ಸಮಸ್ತ ವಿಷಯಗಳನ್ನೂ ಒಳಗೊಂಡಿವೆ. ಇವುಗಳಲ್ಲಿ ಪ್ರಧಾನವಾದದ್ದು 21 ಸಂಪುಟಗಳಿಂದ ಕೂಡಿದ 'ಅಮರವಾಣೀ' ಗ್ರಂಥಮಾಲೆ. ಇವು ಮಹರ್ಷಿ ಸಂಸ್ಕೃತಿಯ ಅನೇಕಾನೇಕ ವಿಷಯಗಳನ್ನು ಕುರಿತು ಶ್ರೀರಂಗಮಹಾಗುರುಗಳು ಅಗಾಗ್ಗೆ ಮಾಡಿದ ಪ್ರವಚನ/ಸಂಭಾಷಣೆಗಳ ಸಂಕಲನಗಳನ್ನು ಒಳಗೊಂಡ ಅಮೂಲ್ಯ ಗ್ರಂಥರಾಶಿಯಾಗಿದೆ. 'ಭಾರತೀಯ ಹಬ್ಬ ಹರಿದಿನಗಳು' ಎಂಬ ಬೃಹತ್ಗ್ರಂಥವು ಭಾರತೀಯರ ಹಬ್ಬಗಳ ಆಚ್ಜರಣೆಯ ಔಚಿತ್ಯ, ಕಾಲ, ಕ್ರಮ, ಬಳಸಲ್ಪಡುವ ಪದಾರ್ಥಗಳು ಇವುಗಳ ಹಿಂದೆ ಅಡಗಿರುವ ವಿಜ್ಞಾನವನ್ನು ವಿಸ್ತಾರವಾಗಿ ತಿಳಿಸುತ್ತಾ ಜನಸಾಮಾನ್ಯರಿಗೂ ಉಪಯುಕ್ತವಾಗಿದೆ. ಇಂತಹ ಸುಮಾರು 80 ತಕ್ಕು ಹೆಚ್ಚಿನ ಪ್ರಕಾಶನಗಳನ್ನು ಮಂದಿರವು ಹೊರತಂದಿದೆ. ಈ ಪ್ರಕಟಣೆಗಳ ಪಟ್ಟಿಯನ್ನು ಶ್ರೀಮಂದಿರದ ವೆಬ್ ಸೈಟಿನಲ್ಲಿ(www.ayvm.in) ಕಾಣಬಹುದು. ಇವೆಲ್ಲವೂ ಅಯೋವಿಮಂದ ಹೃದಯ ಸ್ಥಾನದಲ್ಲಿರುವ ಭಾರತೀಯ ಸಂಸ್ಕೃತಿಯ ಆಳ ಅಗಲಗಳ ಪರಿಚಯವನ್ನು ಕೊಡುತ್ತವೆ. 'ಆರ್ಯಸಂಸ್ಕೃತಿ' ಎಂಬ ಮಂದಿರದ ಮಾಸಪತ್ರಿಕೆಯೂ ಸಹ ಸುಮಾರು 43 ವರ್ಷಗಳಿಂದ ಮಹಾಗುರುವಿನ ವಿಚಾರಗಳನ್ನು ಜನರ ಮುಂದಿಡುವ ಕಾರ್ಯವನ್ನು ನಡೆಸುತ್ತಿದೆ.

2. ಉಪನ್ಯಾಸಗಳು, ಕಾರ್ಯಾಗಾರಗಳು

ಶ್ರೀಮಂದಿರದ ಆವರಣದಲ್ಲಿ ವೇದಾಂತಶಾಸ್ತ್ರ, ಧರ್ಮಶಾಸ್ತ್ರ, ಆಯುರ್ವೇದ, ಯೋಗ, ರಾಮಾಯಣ-ಮಹಾಭಾರತ-ಭಾಗವತ, ಆಚಾರ-ವಿಚಾರ, ಕಲೆಗಳು ಮುಂತಾದ ವಿಚಾರಗಳನ್ನು ಕುರಿತ ಸಾವಿರಾರು ಉಪನ್ಯಾಸಗಳು ಮಂದಿರದ ಎಲ್ಲ ಶಾಖೆಗಳಲ್ಲೂ ಸಂಪನ್ನವಾಗುತ್ತಿವೆ. ಭಾರತೀಯ ಸಂಸ್ಕೃತಿಯ ಆಳ-ಅಗಲಗಳನ್ನೂ, ಔನ್ನತ್ಯವನ್ನೂ, ಸೊಬಗನ್ನೂ ಸಾರುವ ವೇದ, ವೇದಾಂಗ, ಪುರಾಣ, ಇತಿಹಾಸ ಮುಂತಾದವುಗಳನ್ನು ತಿಳಿಯಪಡಿಸುವ ಕಾರ್ಯಾಗಾರಗಳು ತಿಂಗಳಿಗೊಮ್ಮೆ ನಡೆಯುತ್ತಲಿವೆ. ಹಾಗೆಯೇ ಸಂಸ್ಕೃತಿಯ ವಿವಿಧ ವಿಷಯಗಳನ್ನು ಅಧಿಕರಿಸಿ ಅನ್ಯಾನ್ಯ ವೇಧಿಕೆಗಳಲ್ಲಿ ಉಪನ್ಯಾಸಗಳನ್ನು ನಡೆಸುವುದು ಹಾಗೂ ಬಿಡಿ ಲೇಖನಗಳನ್ನು ಪ್ರಕಟಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಕಾಲ ದೇಶ ಔಚಿತ್ಯಗಳನ್ನನುಸರಿಸಿ ಸಂಸ್ಥೆಯು ಹಮ್ಮಿಕೊಂಡಿದೆ.

3. ಸಂಶೋಧನೆಗಳು

ಮಂದಿರವು ಭಾರತೀಯ ಸಂಸ್ಕೃತಿ-ನಾಗರಿಕತೆಗಳ ಬಗ್ಗೆ ಮೌಲಿಕವಾದ ಸಂಶೋಧನೆಯನ್ನು ನಡೆಸುತ್ತಿದ್ದು ಆಧುನಿಕ ಉಪಕರಣಗಳನ್ನೊಳಗೊಂಡ ಸಂಶೋಧನೆಯ ಫಲಗಳನ್ನು ಉಚಿತವಾದ ಕಾಲದೇಶಗಳಲ್ಲಿ ಲೋಕದ ಮುಂದಿಡುತ್ತಿದೆ.

ಸಹಸ್ರಾರು ಮಂದಿಯು ಏಕನಿಷ್ಠೆಯಿಂದ ಮಹಾಗುರುದಂಪತಿಗಳ ಆಶಯದಂತೆ, ಅವರ ಅನುಗ್ರಹವನ್ನು ಅವಲಂಬಿಸಿ ಸಂಸ್ಥೆಯ ಆಶ್ರಯದಲ್ಲಿ ನಿಶ್ಯಬ್ಧವಾಗಿ ಬೆಳೆಯುತ್ತಿದ್ದಾರೆ ಹಾಗೂ ಸನಾತನಾರ್ಯಭಾರತ ಸಂಸ್ಕೃತಿಯ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಈ ಎಲ್ಲ ಕೆಲಸ ಕಾರ್ಯಗಳಿಗೂ ಆವಶ್ಯಕವಾದ ವಿಚಾರಗಳನ್ನೂ, ಸ್ಫೂರ್ತಿಯನ್ನೂ, ಉತ್ತೇಜನವನ್ನೂ ನೀಡುತ್ತಿರುವುದು ಶ್ರೀಮಂದಿರದ ಅಧ್ಯಕ್ಷರಾದ ಶ್ರೀ ಶ್ರೀರಂಗಮಹಾಗುರುಗಳು ಎಂಬುದನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಶ್ರೀರಂಗಮಹಾಗುರುಗಳು ಧ್ಯಾನಸಮಾಧಿಯ ಉತ್ತುಂಗಶಿಖರವನ್ನೇರಿ ಅಲ್ಲಿರಾರಾಜಿಸುತ್ತಿರುವ ಜ್ಯೋತಿಯದರ್ಶನವನ್ನು ಮಾಡಿದವರಾಗಿದ್ದರು. ಹೊರಗೆ ಸಾಮಾನ್ಯ ಮನುಷ್ಯನಂತೆ ಸರಳ ಜೀವನವನ್ನು ನಡೆಸುತ್ತಿದ್ದರೂ ಕ್ಷಣಮಾತ್ರದಲ್ಲಿ ಒಳಪ್ರಪಂಚವನ್ನು ಪ್ರವೇಶಿಸಿ ಸಮಾಧಿಸ್ಥಿತಿಯನ್ನು ತಲುಪಬಲ್ಲವರಾಗಿದ್ದರು. ಅಲ್ಲಿ ಬೆಳಗುತ್ತಿರುವ ಜ್ಯೋತಿಯಿಂದಲೇ ಸಕಲ ವಿದ್ಯೆಗಳೂ ಹೊರಹೊಮ್ಮಿ ಬರುತ್ತಿರುವುದನ್ನು ತಮ್ಮ ಅನುಭವದ ಬೆಳಕಿನಲ್ಲಿ ಸಾರಿದರು. ಅವರು ಸಾವಿರಾರುಮಂದಿ ಶಿಷ್ಯರಿಗೆ ಜ್ಞಾನದೀಕ್ಷೆಯನ್ನುಕೊಟ್ಟು ಆ ವಿದ್ಯಾಮೂಲ ಜ್ಯೋತಿಯ ಕಡೆಗೆ ಅವರನ್ನು ಕರೆದೊಯ್ಯುವ ಮಹತ್ಕಾರ್ಯವನ್ನು ಕೈಗೊಂಡಿರುವ ಧೀರ ಪುರುಷರು.

ಪರಮಪೂಜ್ಯ ರಂಗಪ್ರಿಯ ಶ್ರೀಶ್ರೀಗಳವರು ನಂಜನಗೂಡು ತಾಲೂಕಿನ ಹೆಡೆತಲೆ ಗ್ರಾಮದವರು. ಇವರ ಪವಿತ್ರ ಜನನವು ೧೯೨೭-ಸಿಂಹಮಾಸ ಮಖಾನಕ್ಷತ್ರದ ಶುಭದಿನದಂದು.

ಬಾಲ್ಯದ ವಿದ್ಯಾಭ್ಯಾಸವು ನಂಜನಗೂಡಿನಲ್ಲಿಮುಂದೆ ಮೈಸೂರು ಸಂಸ್ಕೃತ ಪಾಠಶಾಲೆಯಲ್ಲಿ ಮುಂದುವರೆದುಮಧ್ಯಪ್ರದೇಶದ ಸೌಗರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಎಮ್.ಏ ಪದವಿ-ಸುವರ್ಣ ಪದಕವನ್ನು ಪಡೆದರು. ಜೊತೆಗೆ ವೇದಾಂತಶಾಸ್ತ್ರಧರ್ಮಶಾಸ್ತ್ರ
ನ್ಯಾಯಶಾಸ್ತ್ರಅಲಂಕಾರಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ಸಂಸ್ಕೃತ-ತಮಿಳು-ಹಿಂದಿ-ಪ್ರಾಕೃತ-ಪಾಳೀ ಹಾಗೂ ಆಂಗ್ಲಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ನಡೆದಾಡುವ ಗ್ರಂಥಾಲಯವೇ ಆಗಿದ್ದರು! ಅತ್ಯದ್ಭುತವಾಗ್ಮಿಗಳೂಪ್ರತ್ಯುತ್ಪನ್ನಮತಿಗಳೂ ಆದವರು. ತಮ್ಮ ಯೌವನದಲ್ಲೇ ೪ ರಾತ್ರಿಗಳಲ್ಲಿ ಗಜೇಂದ್ರ ಮೋಕ್ಷವೆಂಬ ಅದ್ಭುತ ಸಂಸ್ಕೃತ ಕಾವ್ಯವನ್ನು ರಚಿಸಿ ಪ್ರಶಸ್ತಿಯನ್ನು ಪಡೆದ ಮಹಾನ್ ಕವಿ. ಇವರು ಆಶುಗಕವಿಗಳಾಗಿದ್ದುದೂ ಪ್ರಸಿದ್ಧವಾದ ವಿಚಾರವಾಗಿದೆ.
ಪಾಂಡಿತ್ಯದಜೊತೆಗೆ ಅತ್ಯಂತ ವಿನಯ ಸಂಪನ್ನರುಸರಳರುಸುಲಭರೂ ಆಗಿ ಆದರ್ಶ ಉಪಾದ್ಯಾಯರಾಗಿಸೇವೆ ಸಲ್ಲಿಸಿದರು. 
ಹುಣುಸೂರುಚಾಮರಾಜನಗರಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದುಬೆಂಗಳೂರಿನ ಬಸವನಗುಡಿ ನ್ಯಾಷನಲ್‌ಕಾಲೇಜಿನ ಪ್ರಾಧ್ಯಾಪಕರಾಗಿ ನಿವೃತ್ತರಾದರು. He is a born Teacher ಎಂಬುದಾಗಿ ಎಲ್ಲರಿಂದಲೂ ಕೊಂಡಾಡಲ್ಪಟ್ಟವರು.
ಇವೆಲ್ಲಕ್ಕೂ ಶಿಖರಪ್ರಾಯವಾದುದೆಂದರೆ ಬಾಲ್ಯದಿಂದಲೇ ಭಗವದ್ಭಕ್ತ ಶಿರೋಮಣಿಗಳಾಗಿದ್ದರು. ಜೀವನದುದ್ದಕ್ಕೂ ಪರಮ ವಿರಕ್ತರಾಗಿದ್ದವರು. ಶ್ರೀರಂಗ ಮಹಾಗುರುಗಳ ಪ್ರಮುಖ ಶಿಷ್ಯರು. ಗುರುನಿಷ್ಠೆಗೆ ಆದರ್ಶಪ್ರಾಯರು. ಅತ್ಯುನ್ನತ ಮಟ್ಟದ ತಪಸ್ವಿಯೂಯೋಗಿಗಳೂ ಆಗಿದ್ದರು. ತನ್ನೆಡೆಗೆಬಂದ ಮುಮುಕ್ಷುಗಳಿಗೆ ಸೂಕ್ತಸಂಸ್ಕಾರಗಳನ್ನು ಕೊಟ್ಟು ಶ್ರೀಗುರುವಿನೆಡೆಗೆ ಕರೆದೊಯ್ದ ಮಹಾಗುರುದ್ವಾರವಾದವರು.
ಶ್ರೀಗುರುವಿನಿಂದ ಕಲಿತುಪಾಂಡಿತ್ಯದಿಂದ ಬೆಳೆಸಿಕೊಂಡ ಭಾರತೀಯಸಂಸ್ಕೃತಿಯ ವಿಚಾರಗಳನ್ನು ಲೋಕದಮುಂದಿಡುವ ಗುರುಸೇವಾ ಕಾರ್ಯದಲ್ಲೇ ಅನವರತವೂ ನಿರತರಾಗಿದ್ದರು. ಈ ನೇರದಲ್ಲಿ ಸಾವಿರಾರು ಪ್ರವಚನಗಳನ್ನು ಅನೇಕ ವೇದಿಕೆಗಳಲ್ಲಿ ಕರುಣಿಸಿದ್ದಾರೆ. ಭಾರತೀಯ ಹಬ್ಬ-ಹರಿದಿನಗಳು ಎಂಬ ಬೃಹತ್‌ಗ್ರಂಥವನ್ನು ರಚಿಸಿ ಲೋಕಕ್ಕೆ ಪರಮೋಪಕಾರವನ್ನು ಮಾಡಿರುವರು. ವಿಚಾರಸುಮನೋಮಾಲಾ ಮುಂತಾಗಿ ಅನೇಕ ಗ್ರಂಥಗಳು ಇವರ ಪ್ರವಚನಗಳನ್ನೊಳಗೊಂಡದ್ದಾಗಿವೆ.
ಅಷ್ಟಾಂಗಯೋಗ ವಿಜ್ಞಾನ ಮಂದಿರದ ಕಾರ್ಯದರ್ಶಿಗಳಾಗಿದ್ದು ಕಾರ್ಯಗಳನ್ನು ಗುರುವಿನ ಆಶಯದಂತೆ ನಡೆಸುತ್ತಿದ್ದ ಮಹಾತ್ಮರು. ಭಾರತ ದರ್ಶನದ ಅಧ್ಯಕ್ಷರಾಗಿದ್ದು ಶ್ರೀಮದ್ರಾಮಾಯಣಮಹಾಭಾರತಶ್ರೀಮದ್ಭಾಗವತಹರಿವಂಶ ಮುಂತಾದ ಗ್ರಂಥಗಳ ಕನ್ನಡ ಅನುವಾದಕ್ಕೆ ಮಾರ್ಗದರ್ಶಕರಾಗಿದ್ದರು.
ಸ್ವಾಮಿಗಳು ಪರಮ ಕರುಣಾಳುಗಳೂಉದಾರರೂ ಆಗಿದ್ದರು. ವಯಸ್ಸು-ಕುಲ-ಗೋತ್ರ-ಜಾತಿ-ಮತ ಇದಾವ ಭೇದವೂಇಲ್ಲದೇ ತಮ್ಮಲ್ಲಿಬಂದವರೆಲ್ಲರಲ್ಲೂ ಒಂದೇರೀತಿಯಾಗಿ ಪರಮ ಪ್ರೀತಿ-ವಾತ್ಸಲ್ಯಗಳನ್ನು ತೋರುತ್ತಿದ್ದರು ಎಂಬುದಕ್ಕೆ ಅವರಲ್ಲಿಗೆ ಬಂದವರೆಲ್ಲರೂ ಸಾಕ್ಷಿಯಾಗಿದ್ದಾರೆ. (ಸ್ಮರಣಸಂಪುಟದಲ್ಲಿ ವಿವರಗಳನ್ನು ಕಾಣಬಹುದು)
ಹೀಗೆ ಉನ್ನತ ಮಟ್ಟದಲ್ಲಿ ಲೋಕೋಪಕಾರವನ್ನು ಗುರುಸೇವರೂಪದಲ್ಲಿ ಸಲ್ಲಿಸಿ ೨೦೧೨ ಇಸವಿ ಮಾರ್ಚ್ ತಿಂಗಳಿನಲ್ಲಿ ಭಗವಂತನ ಪಾದಾರವಿಂದಗಳನ್ನು ಸೇರಿದರು.
ಸಂಗ್ರಹ : ತಾರೋಡಿಸುರೇಶ


ಪೂಜ್ಯ ಶ್ರೀಕಂಠರ ಒಂದು ಸಂಕ್ಷಿಪ್ತ ಪರಿಚಯವನ್ನು ನೀಡುವ ಪ್ರಯತ್ನವಾಗಿದೆ ಇದು. ಶ್ರೀರಂಗಮಹಾಗುರುಗಳು ಅವರಿಗೆ ಇಟ್ಟ ನಾಮಧೇಯವು ಶಂಕರನಾರಾಯಣದಾಸ ಎಂಬುದಾಗಿ. ಶ್ರೀಕಂಠರು ದೈಹಿಕವಾಗಿ ಅಷ್ಟೇನೂ ಎತ್ತರವಲ್ಲದ ವ್ಯಕ್ತಿ. ಸದಾ ಮುಖದಲ್ಲಿ ಮಂದಹಾಸ. ಗುರುಭಾಯಿಗಳನ್ನು ಕಂಡೊಡನೆ ಸಂತೋಷದಿಂದ ಮುಖ ಇನ್ನೂ ಅರಳುತ್ತಿತ್ತು. ಶ್ರೀಕಂಠರ ಬಗ್ಗೆ ಮೊದಲಿಗೆ ಸ್ಮರಣೆಗೆ ಬರುವುದು ಅವರು ಸಾರಳ್ಯ. ಅತ್ಯಂತ ನಿಗರ್ವಿಗಳು. ಸರಳರೆಂದಾಕ್ಷಣ ಅವರು ಮುಗ್ಧರು ಎಂದಲ್ಲ. ಅಷ್ಟಾಂಗಯೋಗವಿಜ್ಞಾನಮಂದಿರದಂತಹ ಒಂದು ಗುರುತರವಾದ ಸಂಸ್ಥೆಯ ಕಾರ್ಯದರ್ಶಿಯಾಗಿ, ಮಹಾಗುರುದಂಪತಿಗಳ ಆಶಯದಂತೆ ನಡೆಯುವುದು ಮತ್ತು ನಡೆಸುವುದು ಎರಡೂ ಬಹು ಜವಾಬ್ದಾರಿಯುತವಾದ ಕೆಲಸ. ಮಹಾಗುರುವಿನ ಹೆಜ್ಜೆಯ ಗೆಜ್ಜೆಯಾಗಬೇಕು. ಮೌಲಿಕವಾಗಿ ಅದಕ್ಕೆ ಬೇಕಾದ ಶಕ್ತಿಯನ್ನು ಮಹಾಗುರುಗುರುದಂಪತಿಗಳೇ ನೀಡಿ ಸೇವೆಯನ್ನು ಕೈಗೊಳ್ಳುತ್ತಿದ್ದುದರಿಂದ ಒಂದು ದೃಷ್ಟಿಯಿಂದ ಸುಲಭವೂ ಹೌದು. ಪೂಜ್ಯ ಶ್ರೀಕಂಠರು ಹಾಗೆ ಮಹಾಗುರುದಂಪತಿಗಳಿಗೆ ತಮ್ಮನ್ನು ಒಪ್ಪಿಸಿಕೊಂಡೇ ನಡೆಯುತ್ತಿದ್ದರು. ಅವರ 35 ವರ್ಷಕ್ಕಿಂತಲೂ ಸುದೀರ್ಘಕಾಲದ ಶ್ರೀಮಂದಿರದ ಪ್ರಧಾನಕಾರ್ಯದರ್ಶಿಗಳಾಗಿ ನಿರ್ವಹಿಸಿದ ರೀತಿಯು ಮಂದಿರದ ಇತಿಹಾಸದಲ್ಲಿಯೇ ಅಪೂರ್ವವಾದ ಸಂಗತಿ.

ಎನ್.ಶ್ರೀಕಂಠ ಎನ್ನುವುದು ಅವರ ನಾಮಧೇಯ. ನಂಜನಗೂಡು ಶ್ರೀಕಂಠ ಎನ್ನುವುದರ ಸಂಕ್ಷಿಪ್ತ ರೂಪವದು. ಇವರು ಶ್ರೀಮತಿ ಲಕ್ಷಮ್ಮ ಹಾಗೂ ಶ್ರೀನರಸಿಂಹಶಾಸ್ತ್ರಿಗಳ ಎರಡನೆಯ ಸುಪುತ್ರ. 1928ರ ಫೆಬ್ರವರಿ 2 ರಂದು ಜನನ. ಒಂಬತ್ತು ತಿಂಗಳು ಕಾಯದೇ ಬೇಗ ಭೂಮಿಗೆ ಬಂದರೆಂದು ಅವರನ್ನು ಬಂಧುಗಳು ಹಾಸ್ಯಮಾಡುತ್ತಿದ್ದುದುಂಟು. ಶ್ರೀ ನರಸಿಂಹಶಾಸ್ತ್ರಿಗಳಿಗೆ ನಾಲ್ಕು ಜನ ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಶ್ರೀಕಂಠರೂ ಅವರ ಅಣ್ಣನವರಾದ ಬಾಲಸುಬ್ರಮಣ್ಯರವರೂ ತಮ್ಮ ಅನ್ಯೋನ್ಯತೆಯಿಂದಾಗಿ ರಾಮಲಕ್ಷ್ಮಣ ಎಂದೇ ಬಿರುದಾಂಕಿತರಾಗಿದ್ದರಂತೆ.

ಮನೆಯಲ್ಲಿಯೂ ಸದಾಚಾರಸಂಪನ್ನರು. ಹೀಗೆ ವೈದಿಕ ಮನೆತನದಲ್ಲಿ ಬೆಳೆದು ಬಂದದ್ದರಿಂದ ವೈದಿಕ ಆಚಾರ-ವಿಚಾರಗಳ ಬಗ್ಗೆ ಶ್ರೀಕಂಠರಿಗೆ ಸಹಜವಾಗಿಯೇ ಶ್ರದ್ಧಾ-ಭಕ್ತಿಗಳು ಮೂಡಿದ್ದವು. ಲೌಕಿಕ ವಿದ್ಯಾಭ್ಯಾಸದಲ್ಲಿ ಅವರು ರಸಾಯನಶಾಸ್ತ್ರದಲ್ಲಿ B.Sc. (Hons)  ಮಾಡಿ ಕಾಲೇಜಿನ ಉಪನ್ಯಾಸಕರಾದರು. ಸಮಕಾಲದಲ್ಲಿಯೇ M.Sc. ಮಾಡಿದರು. SSLC ಹಾಗೂ PUC ನಲ್ಲಿ ರ‍್ಯಾಂಕ್ ಬಂದಿದ್ದರು. ವಿವಿಧ ಕಾಲೇಜು ಮತ್ತು ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿ 1988 ಮಾರ್ಚ್ 31 ರಂದು ಪ್ರಾಧ್ಯಾಪಕರಾಗಿ ನಿವೃತ್ತರಾದರು.

1956 ರಲ್ಲಿ ವಿವಾಹ. ಮುಕ್ತಿಗೆ ಅಧಿಕೃತರಾದ ಗೃಹಸ್ಥರಾಗಿದ್ದರು. ಜಿತೇಂದ್ರಿಯನಾಗಿ ಆತ್ಮನಿಷ್ಠನಾಗಿರುವ ಜ್ಞಾನಿಗೆ ಗೃಹಸ್ಥಾಶ್ರಮವು ಯಾವ ಅವದ್ಯವನ್ನು ಮಾಡಲಾರದು.  ಹಿತಕೋರುವ ಭಾರ್ಯೆ ಮತ್ತು ಮಕ್ಕಳು. ಒಟ್ಟು ಆರು ಮಂದಿ ಮಕ್ಕಳು. ಆತ್ಮಜೀವನಕ್ಕೆ ಆದ್ಯತೆ ಕೊಟ್ಟಿದ್ದರೂ ಸದ್ಗೃಹಸ್ಥರಾಗಿ ಮಾಡಬೇಕಾದ ಕರ್ತವ್ಯಗಳಾವುದನ್ನು ಉಪೇಕ್ಷೆ ಮಾಡಲಿಲ್ಲ. ಮಕ್ಕಳ ವಿದ್ಯಾಭ್ಯಾಸ, ವಿವಾಹದ ಎಲ್ಲ ಘಟ್ಟಗಳ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. ಜೊತೆಗೆ ಮಕ್ಕಳನ್ನು ಒಂದು ಸುಸಂಸ್ಕೃತ ವಾತಾವರಣದಲ್ಲಿ ಬೆಳೆಸಿ ಅವರನ್ನು ವಿದ್ಯಾವಿನಯಸಂಪನ್ನರಾದ ಸತ್ಪ್ರಜೆಗಳನ್ನಾಗಿ ರೂಪಿಸಿದರು. ಈ ಎಲ್ಲ ವಿಷಯಗಳಲ್ಲಿಯೂ ಅವರಿಗೆ ಅವರ  ಶ್ರೀಮತಿಯವರಿಂದ ಸಂಪೂರ್ಣ ಸಹಕಾರ ದೊರೆಯಿತು.

ಅವರು ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸವನ್ನಾದರೂ ಸಕಾಲದಲ್ಲಿ ಮಾಡಿ ಮುಗಿಸುತ್ತಿದ್ದರು. ಆರಂಭಿಸುವ ಮುನ್ನವೇ ಚನ್ನಾಗಿ ಪರ್ಯಾಲೋಚಿಸಿ ಕಾರ್ಯ ಸನ್ನದ್ಧರಾಗುತ್ತಿದ್ದರು. ಆರಂಭಿಸಿದ ಮೇಲೆ ಮುಗಿಸದೆ ಬಿಡುತ್ತಿರಲಿಲ್ಲ. ಎಂತಹ ಪರಿಸ್ಥಿತಿಯಲ್ಲಿಯೂ ಸಂಯಮವನ್ನು ಕಳೆದುಕೊಳ್ಳುತ್ತಿರಲಿಲ್ಲ. ಶಾಂತರೀತಿಯಲ್ಲಿಯೇ ಉತ್ತರಿಸುತ್ತಿದ್ದರು. ತರ್ಕಬದ್ಧತೆ ಅವರ ಚಿಂತನೆಯ ಇನ್ನೊಂದು ಪ್ರಮುಖ ಲಕ್ಷಣ. ಅತಿಥಿಅಭ್ಯಾಗತರನ್ನು ಯಥೋಚಿತವಾಗಿ ಸಂಭಾವನೆ ಮಾಡುತ್ತಿದ್ದರು. ತಾವೂ ಸಂತೋಷಪಡುತ್ತಿದ್ದರು. 

ಪ್ರಾಪಂಚಿಕ ಸುಖದ ಕಡೆ ಅತಿಯಾದ ಒಲುಮೆ ಇರುತ್ತಿರಲಿಲ್ಲ. ನಿರಂತರವಾಗಿ ಆರ್ಥಿಕವಾದ ತೊಂದರೆಯಿದ್ದರೂ ಗಳಿಕೆಗಾಗಿ ನ್ಯಾಯಸಮ್ಮತವಲ್ಲದ ಹಾದಿಯನ್ನು ಹಿಡಿಯಲಿಲ್ಲ. ನಿಗರ್ವಿಗಳೂ, ಸಂಘಟನಾ ಕುಶಲರೂ ಆಗಿದ್ದರು. ಸಮಸ್ಯೆಗಳು ಬಂದಲ್ಲಿ ಬಹಳ ಕುಶಲತೆಯಿಂದ ಬಗೆಹರಿಸುತ್ತಿದ್ದರು. ವಿಶ್ವದ ಆಗುಹೋಗುಗಳತ್ತ ಒಂದು ನಿಗಾ ಇರುತ್ತಿತ್ತು. ಹೆಚ್ಚು ಮಾತನಾಡುವವರಾಗಿರಲಿಲ್ಲ. ಆತ್ಮಶ್ರೀಮಂತಿಕೆ, ಬುದ್ಧಿಶ್ರೀಮಂತಿಕೆ ಮತ್ತು ಹೃದಯಶ್ರೀಮಂತಿಕೆಗಳಿಗೆ ಆಗರವಾಗಿದ್ದ ಶ್ರೀಶ್ರೀಕಂಠರು 2006, ಮೇ 5 ರಂದು ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿ ಪರಮಪದನಾಥನಲ್ಲಿ ವಿಲೀನವಾದರು.

ಶ್ರೀಕಂಠರಿಗೆ ಶ್ರೀ ಸೀತಾರಾಮುಗಳು( ಶ್ರೀಮಂದಿರದ ಪೂರ್ವಕಾರ್ಯದರ್ಶಿಗಳು) ಬಹಳ ಆತ್ಮೀಯ ಮಿತ್ರರಾಗಿದ್ದರು. ಶ್ರೀ ಸೀತಾರಾಮುಗಳು ಬಹಳ ಹಿಂದೆಯೇ ಶ್ರೀರಂಗಮಹಾಗುರುಗಳ ಶಿಷ್ಯರಾಗಿದ್ದರು. ಆದರೆ ಕಾರಣಾಂತರದಿಂದ  ಮಹಾಗುರುವಿನ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿರಲಿಲ್ಲ. ಆಪ್ತಸ್ನೇಹಿತರಾಗಿದ್ದ ಕಾರಣದಿಂದ ಸೀತಾರಾಮುಗಳು ಶ್ರೀಕಂಠರನ್ನು ಪದೇಪದೇ ಭೆಟ್ಟಿಯಾಗುತ್ತಿದ್ದರು. ಕೆಲವೊಮ್ಮೆ ನಂಜನಗೂಡಿನಲ್ಲಿಯೇ ಇರುತ್ತಿದ್ದ ಅವರನ್ನು ಭೆಟ್ಟಿಯಾಗಲು ಅವರಲ್ಲಿಗೆ ಬರುತ್ತಿದ್ದರು. ಒಮ್ಮೆ ಮಹಾಗುರುವೂ ಇಬ್ಬರೂ ಪರಸ್ಪರ ನೋಡಿದ್ದರು. ಆದರೆ ಶ್ರೀಗುರುವಿನ ಅಂತರಂಗಪರಿಚಯವಿರಲಿಲ್ಲ. ಜೊತೆಗೆ ಮಹಾಗುರುಗಳೂ ತಮ್ಮ ಶಿಷ್ಯರಿಗೆ ಗುರು-ಶಿಷ್ಯಸಂಬಂಧವನ್ನು ಬಹಿರಂಗಗೊಳಿಸಲು ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಶ್ರೀಸೀತಾರಾಮುಗಳು “ಇವರು ಹೆಡತಲೆಯ ರಂಗಸ್ವಾಮಿಗಳು,ನನ್ನ ಸ್ನೇಹಿತರು” ಎಂದಷ್ಟೇ ಪರಿಚಯಿಸಿದ್ದರು. ಶ್ರೀಗುರುವು ನಂತರ ಶ್ರೀಕಂಠರ ಬಗ್ಗೆ ‘ಇವನು ನನ್ನ ಬಳಿಗೆ ಅವನಾಗಿಯೇ ಬಂದೇ ಬರುತ್ತಾನಪ್ಪಾ’ ಎಂದಷ್ಟೇ ನುಡಿದಿದ್ದರು.

ಶ್ರೀಗುರುವಿನ ದರ್ಶನದ ನಂತರ ಶ್ರೀಶ್ರೀಕಂಠರಲ್ಲಿ ತಮ್ಮ ಪ್ರಕೃತಿಯಲ್ಲಿ ಅನೇಕ ಪರಿವರ್ತನೆಗಳುಂಟಾಗುತ್ತಿದ್ದವು. ಇದನ್ನು ಶ್ರೀಗುರುವಿಗೆ ತಿಳಿಸಿದ ಶ್ರೀಸೀತಾರಾಮುಗಳು,ಗುರುವಿನ ನಿರ್ದೇಶನದಂತೆ ಶ್ರೀಗುರುವಿನ ಬಳಿ ಕರೆದೊಯ್ದರು. ಶ್ರೀಶ್ರೀಕಂಠರು ಮಹಾಗುರುದಂಪತಿಗಳ ಮಾರ್ಗದರ್ಶನದ ಅನುಗ್ರಹಕ್ಕೆ ಪಾತ್ರರಾದರು.

ಶ್ರೀಶ್ರೀಕಂಠರು ಆತ್ಮಾರಾಮನೂ, ಯೋಗೇಶ್ವರನೂ ಆಗಿದ್ದ ಶ್ರೀಗುರುವಿನ ಒಳಸೆಳೆತಕ್ಕೆ ಆಕರ್ಷಿತರಾಗಿ ಬಂದು ಸೇರಿದವರು. “ಮಹಾಗುರುವು ನೀಡುತ್ತಿದ್ದ ಸಂಸ್ಕೃತಿಯ ವಿವರಣೆಗಳು ಅಷ್ಟಾಗಿ  ನೆನಪಿನಲ್ಲಿ ಉಳಿಯದೆ  ಮಹಾಗುರುಗಳ ದಿವ್ಯರೂಪ, ಪ್ರಣವನಾದಸಹಿತವಾದ ಅವರ ಗಾನಲಹರಿ ಅವರನ್ನು ಅಂತರಂಗದಲ್ಲಿ ಮುಳುಗುವಂತೆ ಮಾಡಿಬಿಡುತ್ತಿದ್ದವು. ಶ್ರೀಗುರುದೇವರು ಸಾಮಾನ್ಯವಾಗಿ ಪಾಠಗಳು ಮುಗಿದ ನಂತರ ಪ್ರತಿಕ್ರಿಯೆಯನ್ನು ತಪ್ಪದೇ ಕೇಳುತ್ತಿದ್ದರು. ಆಗ ನನಗೆ ಒಳಗೆ ಉಂಟಾದ ಅನುಭವಗಳ ಸ್ಮರಣೆಯುಂಟಾಗಿ ಪುನಃ ಆ ಸ್ಥಿತಿಗಳೇ ಉಂಟಾಗಿಬಿಡುತ್ತಿದ್ದವು. ಮಹಾಗುರುವು ‘ಇದೇ ನಿಜವಾದ ಪ್ರತಿಕ್ರಿಯೆಯಪ್ಪಾ’ ಎಂದು ಮೆಚ್ಚಿಕೊಳ್ಳುತ್ತಿದ್ದರು. ಇಂತಹ ಅವರ ವಾತ್ಸಲ್ಯ,ಕರುಣೆಗಳೇ ನನ್ನ ಮನದುಂಬಿ ನನ್ನನ್ನು ಧ್ಯಾನದಲ್ಲಿ ಮುನ್ನಡೆಸುತ್ತಿದ್ದವು” ಎಂದು ಶ್ರೀಶ್ರೀಕಂಠರೇ ಹೇಳುತ್ತಿದ್ದುದುಂಟು.

ಹೀಗೆ ತಮ್ಮ ಅಂತರಂಗಯಾತ್ರೆಯಲ್ಲಿ ಶ್ರೀಶ್ರೀಕಂಠರು ಸಾಗುತ್ತಿರಲು, ಅವರ ಪ್ರಕೃತಿಯ ವಿಶಿಷ್ಟತೆಯನ್ನೂ, ಶಬ್ಧಾರ್ಥಗಳ ಅವಿನಾಭಾವಸಂಬಂಧದ ವಿಜ್ಞಾನವನ್ನೂ ಬಲ್ಲ ಶ್ರೀಗುರುವು ಅವರಿಗೆ ‘ಶಂಕರನಾರಾಯಣದಾಸ’ ಎಂಬ ನಾಮಧೇಯವನ್ನು ಅನುಗ್ರಹಿಸಿದರು. ಶಂಕರನಾರಾಯಣಾತ್ಮಕವಾದ ತತ್ವದ ಅಭಿವ್ಯಕ್ತಿಗೆ ತಕ್ಕುದಾದ ಪ್ರಕೃತಿಯಾದ್ದರಿಂದ ಒಳಧರ್ಮವನ್ನು ಪ್ರತಿನಿಧಿಸುವ ಹೆಸರು. ಇದರ ವಿವರಕ್ಕೆ ಇಲ್ಲಿ ಹೋಗುತ್ತಿಲ್ಲ. ಇದು ಭಾರತೀಯ ನಾಮಕರಣ ವಿಜ್ಞಾನಕ್ಕೊಂದು ಅದ್ಭುತವಾದ ಉದಾಹರಣೆಯಾಗಿದೆ. ನಂತರ ಶ್ರೀಗುರುವು ಪ್ರಕಾಶಿತಗೊಳಿಸಿದ್ದ ಅಷ್ಟಾಂಗಯೋಗವಿಜ್ಞಾನಮಂದಿರದ ವ್ಯವಹಾರಗಳಲ್ಲಿ ಈ ಹೆಸರನ್ನೇ ಶ್ರೀಶಂಕರನಾರಾಯಣದಾಸರು ಅಂಕಿತಗೊಳಿಸುತ್ತಿದ್ದರು.

ಶ್ರೀ ಶಂಕರನಾರಾಯಣದಾಸರಿಗೆ  ಶ್ರೀಮಂದಿರದ ಸೇವೆಯು ನಿತ್ಯಕರ್ಮೋಪಾದಿಯಲ್ಲಿತ್ತು. ಒಂದು ದಿನವೂ ಅವರು ಶ್ರೀಮಂದಿರದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದೆ ಇರುತ್ತಿರಲಿಲ್ಲ. ಅವರು ಸುದೀರ್ಘ 35 ವರ್ಷಗಳಿಗಿಂತಲೂ ಹೆಚ್ಚಾಗಿ ಮಂದಿರದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ಶ್ರೀಮಂದಿರದ ದೈನಂದಿನ ಕಾರ್ಯಗಳಲ್ಲದೆ, ಮಹಾಗುರುದಂಪತಿಗಳ ಶಿಷ್ಯರೊಡನೆ ವ್ಯಕ್ತಿಗತ ಮಾತುಕತೆಗಳು, ಹೊಸದಾಗಿ ಬರುವವರಿಗೆ ಸೂಕ್ತ ಮಾರ್ಗದರ್ಶನ, ಹಾಗೂ ವಿಶೇಷ ಉತ್ಸವಾದಿಗಳ ನಿರ್ವಹಣೆ, ಆಡಳಿತಾತ್ಮಕ ವಿಷಯಗಳ ನಿರ್ವಹಣೆ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಶ್ರೀಮಂದಿರಕ್ಕೆ ಸಂಜೆ ಸುಮಾರು 5-6 ಗಂಟೆಗೆ ಹೆಜ್ಜೆಯಿಟ್ಟರೆಂದರೆ ತಿರುಗಿ ಸ್ವಗೃಹವನ್ನು ಸೇರುವುದು ರಾತ್ರಿ 10 ಗಂಟೆಯಾಗುತ್ತಿತ್ತು.ಅಲ್ಲಿಯವರೆಗೂ ಎಡಬಿಡದ ಕೆಲಸಗಳು. ತಮ್ಮ ಮನೆಯ ವಿವಾಹ ಇತ್ಯಾದಿ ಕಾರ್ಯಗಳನ್ನೂ ಮಂದಿರದ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ಇಟ್ಟುಕೊಳ್ಳುತ್ತಿದ್ದರು.

ಈ ನಡುವೆ ಮಹಾಗುರುಗಳು ಶಂಕರನಾರಾಯಣದಾಸರಿಗೆ ”ಅಪ್ಪಾ ನಿನ್ನ ಗುರುವಿನ ಸಂಸ್ಥೆಯಲ್ಲಿ ಯಾವುದೇ ಸೇವೆ ಸಲ್ಲಿಸಬೇಕಾಗಿ ಬಂದರೂ ಅದಕ್ಕೆ ಸಿದ್ಧನಿರಬೇಕಪ್ಪಾ. ಜೊತೆಗೆ ನನ್ನನ್ನು ಕೇಳದೆ ಬೇರೆ ಯಾವುದೇ ಸಂಸ್ಥೆಗೂ ನಿನ್ನ ಹೆಸರನ್ನು ಕೊಡುವುದಾಗಲೀ, ಸದಸ್ಯನಾಗುವುದಾಗಲೀ ಬೇಡವಪ್ಪಾ” ಎಂಬ ಸೂಚನೆಯನ್ನು ಕೊಟ್ಟಿದ್ದರಂತೆ. ಈ ಮಾತನ್ನು ಸ್ಮರಿಸುತ್ತಿರುವಾಗ ಅವರಲ್ಲಿ ಒಂದು ಧನ್ಯತೆಯ ಭಾವ ಮೂಡುತ್ತಿದ್ದುದನ್ನು ಗಮನಿಸಿದ್ದೇನೆ. ಅದರಂತೆಯೇ ಅವರು ತಮ್ಮ ಕೊನೆ ಉಸಿರಿರುವವರೆಗೂ ನಡೆದುಕೊಂಡರು.

ಈ ಪೂರ್ವದಲ್ಲಿ 'ಶ್ರೀಭಾರತೀಮಂದಿರ' ವೆಂಬ ಸಾಂಸ್ಕೃತಿಕ ಸಂಸ್ಥೆಯೊಂದು ಮಹಾಗುರುವಿನ ಅಣತಿಯಂತೆ ನಂಜನಗೂಡಿನಲ್ಲಿ ಸ್ಥಾಪಿತವಾಗಿತ್ತು. ಮಹಾಗುರುವಿತ್ತ ಸ್ಫೂರ್ತಿಯ ಹಿನ್ನೆಲೆಯಲ್ಲಿ ತನ್ನ ಸಂಸ್ಕೃತಿಸೇವೆಯನ್ನು ನಡೆಸಿಕೊಂಡು ಬಂದಿತ್ತು. ಶ್ರೀಶ್ರೀಕಂಠರು ತಮ್ಮ ಗುರುವಿನ ಆದೇಶಕ್ಕನುಗುಣವಾಗಿ ಅಲ್ಲಿಯೂ ಕಾರ್ಯದರ್ಶಿಗಳಾಗಿ ದುಡಿದಿದ್ದರು.

ಶ್ರೀಗುರುಪತ್ನೀ ವಿಜಯಲಕ್ಷ್ಮೀಶ್ರೀಮಾತೆಯವರ ಸಾನಿಧ್ಯದಲ್ಲಿ ಅವರು ಒಂದು ಶಿಶುವಿನಂತೆ ಆಗಿಬಿಡುತ್ತಿದ್ದರು. ಶ್ರೀಗುರುವೂ ಅನೇಕ ಭಾರಿ ಶ್ರೀಮಾತೆಯವರನ್ನು ಕರೆ ಎನ್ನುವುದರ ಬದಲು “ನಿನ್ನ ಅಮ್ಮನನ್ನು ಕರೆಯಪ್ಪಾ” ಎಂದೇ ಹೇಳುತ್ತಿದ್ದರಂತೆ. ಶ್ರೀಮಾತೆಯವರನ್ನು ಕೇಳದೆ ಎಲ್ಲಿಗೂ ಹೋಗುತ್ತಿರಲಿಲ್ಲ.ಏನನ್ನೂ ಮಾಡುತ್ತಿರಲಿಲ್ಲ. ತಾವಿರುವುದು ಅವರ ಸೇವೆ, ಸಂಕಲ್ಪಗಳ ವಿಸ್ತಾರಕ್ಕೆ ಎಂಬ ಒಂದೇ ಖಚಿತವಾದ ತೀರ್ಮಾದಲ್ಲಿ ಇದ್ದುಬಿಡುತ್ತಿದ್ದರು.

ಮಹಾಗುರುಗಳು ಅವಿರತವಾಗಿ ಮಹರ್ಷಿಸಂಸ್ಕೃತಿಯನ್ನು ಕುರಿತು ಪಾಠ-ಪ್ರವಚನಗಳನ್ನೂ, ಅವುಗಳನ್ನು  ಶಿಷ್ಯರಿಗೆ ಮನಗಾಣಿಸಲು ಅದ್ಭುತವಾದ ಪ್ರಯೋಗಗಳನ್ನು  ಮಾಡುತ್ತಿದ್ದರಷ್ಟೆ. ಒಂದು ಆತ್ಮಸಿದ್ಧವೂ, ಸಹಜಸಿದ್ಧವೂ ಸತ್ಯಸಿದ್ಧವೂ ಆದ  ಆ ವಿಚಾರ ಸರಣಿಯನ್ನು ಶಿಷ್ಯರಲ್ಲಿ ಬೆಳೆಸಲು ಅವರು ಅಹೋರಾತ್ರಿ ದುಡಿಯುತ್ತಿದ್ದರು. ಆ ವಿದ್ಯಾ ಸರಣಿಯನ್ನು ಬೆಳೆಸಲು ಶ್ರೀಮಂದಿರವು ಕಾಲಕಾಲಕ್ಕೆ ಹಾಕಿಕೊಳ್ಳುತ್ತಿದ್ದ ಯೋಜನೆಗಳನ್ನು ರೂಪಿಸುವಲ್ಲಿಯೂ ಮತ್ತು ಕಾರ್ಯಗತಗೊಳಿಸುವಲ್ಲಿಯೂ ಸದಾ ಮಗ್ನರಾಗಿರುತ್ತಿದ್ದರು. ಶ್ರೀಶಂಕರನಾರಾಯಣದಾಸರು ಶ್ರೀಮಂದಿರದಿಂದ ಪ್ರಕಾಶಗೊಳ್ಳುತ್ತಿರುವ ಆರ್ಯಸಂಸ್ಕೃತಿ ಮಾಸಪತ್ರಿಕೆಯ ಸಂಪಾದಕರಾಗಿ ಸುಮಾರು 27 ವರ್ಷಗಳ ಸುದೀರ್ಘಕಾಲ ಸೇವೆ ಸಲ್ಲಿಸಿದರು. ಹಾಗೆಯೇ ಜ್ಞಾನವಿಜ್ಞಾನಪೂರ್ಣವಾದ ಮಹಾಗುರುವಿನ ಪ್ರವಚನಗಳ ಸಂಕಲನವಾದ 'ಅಮರವಾಣೀ' ಗ್ರಂಥಮಾಲೆಯ ಪ್ರಕಾಶನದಲ್ಲಿಯೂ ಮುಂಚೂಣಿಯಲ್ಲಿದ್ದು ತಾವಿರುವಷ್ಟು ಕಾಲವೂ ಅದನ್ನು ನಿರ್ವಹಿಸಿದರು. ಮಹಾಗುರು ಕೊಟ್ಟ ವಿದ್ಯಾಸಂಪತ್ತನ್ನು ಲೋಕಕ್ಕೆ ಹರಿಸುವಲ್ಲಿ ಈ ಪ್ರಕಾಶನಗಳ ಪಾತ್ರದ ಬಗ್ಗೆ ಅವರಿಗೆ ಅತೀವ ಧನ್ಯತೆಯ ಭಾವವಿತ್ತು.

ಅನೇಕ ಮಹನೀಯರು ತಮ್ಮ ಉಪನ್ಯಾಸ, ಗ್ರಂಥರಚನೆಗಳ ಮುಖಾಂತರ ತಮ್ಮ ವಿಷಯಗಳನ್ನು ಜಗತ್ತಿಗೆ ಹಂಚುವುದುಂಟು. ಆದರೆ ಶ್ರೀಶಂಕರನಾರಾಯಣದಾಸರು ತಮ್ಮ ವ್ಯಕ್ತಿಗತವಾದ ಮಾತುಕತೆಗಳಿಂದ ಅದನ್ನು ನಿಶ್ಶ್ಯಬ್ಧವಾಗಿ ಸಾಧಿಸುತ್ತಿದ್ದರು. ಮುಕ್ತವಾದ ಚರ್ಚೆಗಳ ಮೂಲಕ ಕಿರಿಯ ಸಾಧಕರ ಮನಸ್ಸನ್ನು ವಿಕಾಸಗೊಳ್ಳುವಂತೆ ಮಾಡುತ್ತಿದ್ದರು. ಸೇವಾಮನೋಭಾವ ಅವರಲ್ಲಿ ವೃದ್ಧಿಸುವಂತೆ ನೋಡಿಕೊಳ್ಳುತ್ತಿದ್ದರು. ಸನಾತನಾರ್ಯಭಾರತಮಹರ್ಷಿಗಳ ಸಂಸ್ಕೃತಿಯ ಶ್ರೇಷ್ಠತೆಯನ್ನು ಮನಗಾಣಿಸಲು ಚಿಂತನೆಗೆ ತೊಡಗಿಸುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದರು. ಶ್ರೀಮಂದಿರವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಭಾವಿಸಿ ತಮ್ಮ ತನುಮನಧನಜೀವನವನ್ನು ಮಹಾಗುರುದಂಪತಿಗಳ ಪಾವನವಾದ ಪಾದಕಮಲಗಳಲ್ಲಿ ಅಂತರಂಗ-ಬಹಿರಂಗಗಳಲ್ಲಿ ಸಮರ್ಪಿಸಿಕೊಂಡು, ಎಲ್ಲರಿಗೂ ಒಂದು ಮೇಲ್ಪಂಕ್ತಿಯಾಗಿರುವ, ಹಿರಿಯರಾದ ಶ್ರೀಶಂಕರನಾರಾಯಣದಾಸರಿಗೆ ಶ್ರೀಗುರುಸ್ಮರಣೆಗಳೊಡನೆ ಪ್ರಾಣಪ್ರಣಾಮಗಳು.
ಶ್ರೀಶಂಕರನಾರಾಯಣದಾಸರ ಕುರಿತಾದ ಈ ಸಂಕ್ಷಿಪ್ತವಾದ ಪರಿಚಯವು ಮಹಾಗುರುದಂಪತಿಗಳಿಗೆ ಪ್ರೀತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
ಸಂಗ್ರಹ : ಶ್ರೀ ಮಹಾಬಲ ಭಟ್ಟ

ಶ್ರೀಯುತ ವಿದ್ವಾನ್ ಶ್ರೀ ಛಾಯಾಪತಿ. ಎಂ.ಎ . (Sriyutha Vidvan Sri Chayapathi. M.A.)

ಶ್ರೀ ಶ್ರೀರಂಗಮಹಾಗುರುಗಳ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾದ ಮಂದಿರದ ಉಪಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ಕೀರ್ತಿಶೇಷರಾಗಿರುವ ಶ್ರೀ ಛಾಯಾಪತಿ ಅವರ ಕಿರುಪರಿಚಯ.

ಹಾಸನ ಜಿಲ್ಲೆ ಹಳ್ಳಿ ಮೈಸೂರು ಗ್ರಾಮದ ಶ್ರೀ ಅನಂತರಾಮಯ್ಯ ಮತ್ತು ಶ್ರೀಮತಿ ಕಾಮಾಕ್ಷಮ್ಮ ದಂಪತಿಗಳ ದ್ವಿತೀಯ ಪುತ್ರರು. ಈಶ್ವರನಾಮ ಸಂವತ್ಸರದ ಮಾಘ-ಕೃಷ್ಣ- ಪಂಚಮಿ ಶನಿವಾರದಂದು (19.2.1938) ವರ ಮಾತಾಮಹರ ಸಾಲಿಗ್ರಾಮದ ಗೃಹದಲ್ಲಿ ಜನಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ತಂದೆಯ ವಿಯೋಗ ಆದ ಕಾರಣ ಅವರ ವಿದ್ಯಾಭ್ಯಾಸ ಪ್ರೌಡಶಾಲೆಯವರೆಗೂ (SSLC) ಸಾಲಿಗ್ರಾಮದಲ್ಲಿ ನೆರವೇರಿತು. ಮುಂದಿನ ಓದಿಗಾಗಿ ಮೈಸೂರಿಗೆ ಬಂದರು. ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪೂರ್ವವಿದ್ವತ್ ಮುಗಿಸಿದರು. ಜೊತೆಗೆ ಕನ್ನಡ ಪಂಡಿತ ಪರೀಕ್ಷೆ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ. ಎರಡನ್ನೂ ಸ್ವರ್ಣಪದಕಗಳೊಂದಿಗೆ ಮುಗಿಸಿದರು. ಓದಿನಲ್ಲಿ ತುಂಬ ಚುರುಕುಬುದ್ಧಿ ಮತ್ತು ಪ್ರತಿಭಾಶಾಲಿಗಳಾಗಿದ್ದರು. ಆಗಲೇ 50 ಕ್ಕೂ ಹೆಚ್ಚು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹಳಷ್ಟು ಬಹುಮಾನಗಳನ್ನು ಸಂಪಾದಿಸಿದ್ದರು. ಆಗಿನಿಂದಲೇ ಅವರು ವಿಚಾರ-ವಿಮರ್ಶೆ ಮಾತುಗಾರಿಕೆಯನ್ನು ರೂಢಿಸಿಕೊಂಡವರು. ಇದಕ್ಕೆ ಪುಟವಿಟ್ಟಂತೆ ಸಂಸ್ಕೃತಕಾಲೇಜಿನಲ್ಲಿ ಅಧ್ಯಾಪಕರಾದ ಪೂಜ್ಯ ರಾಮಭದ್ರಾಚಾರ್ಯರಿಂದ ನಿರಂತರವಾಗಿ ಜೊತೆಗೆ ಆಗಾಗ ಪೂಜ್ಯ ದೊರೆಸ್ವಾಮಿಗಳಿಂದ ಆರ್ಷವಿಚಾರಗಳ ಬಗ್ಗೆ ಅಂತೆಯೇ ಶ್ರೀರಂಗಸದ್ಗುರುವಿನ ವಿಚಾರಸರಣಿಯ ಬಗ್ಗೆ ವಿಶೇಷವಾದ ಪರಿಚಯ ಲಭ್ಯವಾಯಿತು. ಭಾಗ್ಯದಿಂದ ಶ್ರೀಗುರುವಿನ ಅನುಗ್ರಹವೂ ದೊರೆತು ಆಧ್ಯಾತ್ಮ ಸಾಧಕರಾದರು. 

ಓದನ್ನು ಮುಗಿಸುತ್ತಿದ್ದಂತೆ ಶ್ರೀ ಛಾಯಾಪತಿಗಳ ಜೀವನ ಮತ್ತೊಂದು ಒಳ್ಳೆಯ ತಿರುವನ್ನು ಕಂಡಿತು. ಉಚ್ಛಶ್ರೇಣಿಯಲ್ಲಿ ಓದನ್ನು ಮುಗಿಸಿದ ಅವರಿಗೆ ಶಿಕ್ಷಣವೃತ್ತಿ ದೊರೆಯಲು ಯಾವ ತೊಂದರೆಯೂ ಇರಲಿಲ್ಲ. ಆದರೆ ಕೂಡಲೆ

ಒಂದು ವೃತ್ತಿಯನ್ನು ಸಂಪಾದಿಸಿ ವಿವಾಹ ಸಂಸಾರಜೀವನ ಎಂದು ಬಿಡುವಿಲ್ಲದ ಜೀವನದಲ್ಲಿ ಸಿಲುಕಿಸಿಕೊಳ್ಳಲು ಮನಸ್ಸಾಗಲಿಲ್ಲ. ಮುಂದೆ ಅದು ಇದ್ದದ್ದೇ. ಆದರೆ ಅದಕ್ಕೂ ಮೊದಲು 1-2 ವರ್ಷಗಳು ಶ್ರೀರಂಗಸದ್ಗುರುವಿನ ಅಂತೇವಾಸಿಯಾಗುಳಿದು ಅವರಿಂದ ಸಾಧ್ಯವಾದಷ್ಟು ದೈವೀವಿಚಾರ ಸದ್ವಿಚಾರಗಳನ್ನು ಕೇಳಿ ಆಸ್ವಾದಿಸಿಕೊಂಡಿರುವುದು ತುಂಬ ಉತ್ತಮವಾದದ್ದೆನಿಸಿತು. ಹೀಗಾಗಿ ಉದ್ಯೋಗದ ವಿಚಾರವನ್ನು ಮುಂದಕ್ಕೆ ಹಾಕಿ ಶ್ರೀಗುರುವಿನ ಬಳಿಯಲ್ಲಿಯೇ ಇರಬೇಕೆಂದು ಬಯಸಿದರು.

1962 ರಲ್ಲಿ ವಿದ್ಯಾರಣ್ಯಪುರಂನಲ್ಲಿ ಶ್ರೀ ಛಾಯಾಪತಿಗಳು ನಡೆದು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಶ್ರೀ ಬಿ.ಟಿ ಶ್ರೀನಿವಾಸ ಐಯಂಗಾರ್ ಸಾರ್ವಜನಿಕ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರು “ಛಾಯಾಪತಿಗಳೇ, ನಾಳೆಯಿಂದ ನಮ್ಮ ಶಾಲೆಗೆ ಕನ್ನಡ ಅಧ್ಯಾಪಕರಾಗಿ ಬನ್ನಿ” ಎಂದು ಕರೆದರು. ಆಗ ಅವರು “ನಾನು ಕನ್ನಡ ಪಂಡಿತ ಪರೀಕ್ಷೆಗೆ ಕಟ್ಟಿದ್ದೇನೆ. ಇನ್ನೂ Result ಬಂದಿಲ್ಲ” ಎಂದಾಗ, ಮುಖ್ಯೋಪಾಧ್ಯಾಯರು “ನೀವು ಈ ದಿನದ ಪೇಪರ್ ನೋಡಿಲ್ಲವೇ? ನಿಮಗೆ ಖಚಿಟಿಞ ಬಂದಿದೆ. ನಾಳೆಯಿಂದ ಬನ್ನಿ” ಎಂದು ಆಹ್ವಾನ ನೀಡಿದರು. 

ಶ್ರೀರಂಗ ಗುರುವು ಕುಟುಂಬಿಗಳು, ಕೃಷಿಕರು. ಆ ವರೆಗೆ ಶ್ರೀಗುರುವಿನ ಬಹಳ ಜನ ಸಾಧಕಭಕ್ತರಿದ್ದರೂ ಅವರೆಲ್ಲ ವಿಶೇಷ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬಂದು ಕಾರ್ಯಕ್ರಮಗಳು ಮುಗಿದೊಡನೆಯೆ ತಮ್ಮ ಮನೆಗಳಿಗೆ ತೆರೆಳುತ್ತಿದ್ದರು. ಇದನ್ನು ಬಿಟ್ಟು ಖಾಯಂ ಆಗಿ ಅಲ್ಲಿಯೇ ಉಳಿಯುವ ಪರಿಪಾಠ ಇರಲಿಲ್ಲ. ಹೀಗಾಗಿ ತಾವೇನು ಮಾಡುವುದು ಎಂದು ಯೋಚಿಸಿ ಶ್ರೀಗುರುವಿನ ಆದ್ಯ ಶಿಷ್ಯರೂ ಆಪ್ತರೂ ಅದೇ ಊರಿನವರೂ ಆದ ಪೂಜ್ಯ ದೊರೆಸ್ವಾಮಿಗಳ ಬಳಿ ತಮ್ಮ ಮನಸ್ಸನ್ನು ತೋಡಿಕೊಂಡರು. ಪೂಜ್ಯ ದೊರೆಸ್ವಾಮಿಗಳು ಶ್ರೀಗುರುವಿನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕೆ ಶ್ರೀಗುರುವು ಯೋಚಿಸಿ ``ಅಪ್ಪಾ ಅವರ ಅಪೇಕ್ಶೆ ಸರಿ. ಆದರೆ ಸಂಸಾರ ಎಂದ ಮೇಲೆ ಪರಿಸ್ಥಿತಿ ಎಲ್ಲಾ ದಿನಗಳಲ್ಲಿಯೂ ಒಂದೇ ತರಹ ಇರುವುದಿಲ್ಲ. ನನ್ನ ಕೃಷಿಕಾರ್ಯಗಳ ಒತ್ತಡಗಳೂ ಕೆಲವು ಇರುತ್ತವೆ. ಅವಕ್ಕೆಲ್ಲಾ ಹೊಂದಿಕೊಂಡು ನಮ್ಮ ಮನೆಯಲ್ಲಿ ಎಲ್ಲರ ಜೊತೆ ಅವರೂ ಒಬ್ಬರಾಗಿ ಇದ್ದುಕೊಳ್ಳುವ ಪಕ್ಷೇ ಆಗಲೀಪ್ಪ ಎಂದರಂತೆ. ಶ್ರೀಛಾಯಾಪತಿಗಳು ಆ ಮನೆಯ (ಶ್ರೀಗುರುಗೃಹದ) ಮತ್ತೊಬ್ಬ ಸದಸ್ಯರಾದರು. ಶ್ರೀಗುರುದಂಪತಿಗಳ ವಾತ್ಸಲ್ಯಧಾರೆಯನ್ನು ವಿಶೇಷವಾಗಿ ಅನುಭವಿಸುವ ಸುಕೃತಿಗಳಾದರು. ಇದೇ ತರಹ ಡಾI ಗಣೇಶರಾಯರನ್ನೂ ಸಹ ಶ್ರೀಸದ್ಗುರುಗಳು ತಮ್ಮ ಮನೆಯಲ್ಲೇ ಕೆಲಕಾಲ ಉಳಿಸಿಕೊಂಡು ನಾಡೀವಿಜ್ಞಾನವನ್ನು ಕುರಿತು ಪಾಠಮಾಡಿದ್ದರು. ಋಷಿಗಳು ಹೇಗೆ ಜ್ಞಾನಪಿಪಾಸುಗಳಾದ ಶಿಷ್ಯರನ್ನು ತಮ್ಮ ಆಶ್ರಮಗಳಲ್ಲೇ ಇಟ್ಟುಕೊಂಡು ವಿದ್ಯಾದಾನ ಅನ್ನದಾನ ಎರಡನ್ನೂ ನೀಡಿ ಬೆಳಸುತ್ತಿದ್ದರೋ ಋಷಿಗಳ ಜ್ಞಾನ-ವಿಜ್ಞಾನ, ವಿದ್ಯೆಕಲೆ ಸಂಸ್ಕೃತಿಗಳನ್ನು ಉಳಿಸಲು ಈ ಲೋಕಕ್ಕೆ ಬಂದಿದ್ದ ಶ್ರೀರಂಗ ಸದ್ಗುರು ದಂಪತಿಗಳು ಆ ಆದರ್ಶವನ್ನೇ ಮುಂದುವರಿಸಿದರು.

ಅಂತೂ ಪುಣ್ಯಶಾಲಿಗಳಾದ ಶ್ರೀಛಾಯಾಪತಿಗಳು ಹೆಡತಲೆಗೆ ಹೋಗಿ ಶ್ರೀಗುರುಗೃಹ ಸೇರಿ ಶ್ರೀಗುರುವಿನ ಅಂತೇವಾಸಿಗಳಾದರು. ಇದನ್ನು ನೆನಸಿಕೊಂಡಾಗಲೆಲ್ಲಾ ಶ್ರೀ ಛಾಯಾಪತಿಗಳು ಶ್ರೀಗುರುದಂಪತಿಗಳ ವಾತ್ಸಲ್ಯ ಕಾರುಣ್ಯಗಳ ಬಗ್ಗೆ ಭಾವುಕರಾಗಿಬಿಡುತ್ತಿದ್ದರು. ಶ್ರೀಗುರುವೂ ಸಹ ಈ ಕಾಲವನ್ನು ಉಪಯೋಗಿಸಿಕೊಂಡು ಶ್ರೀಛಾಯಾಪತಿಗಳ ಹೃದಯ ಬುದ್ಧಿಗಳಲ್ಲಿ ಒಂದು ಶಿಲ್ಪವನ್ನು ಕೆತ್ತಿದರು. ಸಾಮಾನ್ಯವಾಗಿ ಬೆಳಗಿನಿಂದ ರಾತ್ರಿ ವಿಶ್ರಮಿಸುವವರೆಗೂ ಕೆಲವೊಮ್ಮೆ ಕೃಷಿಕಾರ್ಯಗಳಿಗಾಗಿ ಹೊಲ-ಗದ್ದೆಗಳಿಗೆ ಹೋದರೆ ಅಲ್ಲೂ ಹೋಗಿ ಬರುವ ದಾರಿಯಲ್ಲಿಯೂ ಹಂತಹಂತವಾಗಿ ಮೇಲೆ ಸೂಚಿಸಿರುವ ವ್ಯಾಪಕ ವಿಷಯಗಳನ್ನು ಕುರಿತು ತಮ್ಮ ದರ್ಶನವನ್ನೆಲ್ಲ ಬಿತ್ತರಿಸಿ ತಿಳಿಸಿದರು. ಇದರಿಂದ ಶ್ರೀಛಾಯಾಪತಿಗಳಿಗೆ ಉಂಟಾಗುತ್ತಿದ್ದ ಸಂತೋಷ ಆತ್ಮೋಕರ್ಷ ಸ್ಪೂರ್ತಿಗಳು ಅವರು ಆ ಕುರಿತು ಹೇಳುವಾಗಲೇ ಕೇಳಿದವರಿಗೆ ಮನದಟ್ಟಾಗುತ್ತಿದ್ದವು. ಅಂತೂ ಯೋಗೇಶ್ವರಿಯಾದ ಶ್ರೀಮಾತೆಯವರು ದಯಪಾಲಿಸುತ್ತಿದ್ದ ಪ್ರಸಾದಗಳು ಅವರ ಚಿತ್ತ ಪ್ರಸನ್ನತೆ ಧಾತುಪ್ರಸನ್ನತೆಗಳಿಗೆ ಕರಣವಾಗಿದ್ದರೆ ಶ್ರೀಗುರುವಿನ ಸನ್ನಿಧಿ, ವಾಗ್ವ್ಯಾಪಾರಗಳು ಬುದ್ಧಿಗೆ ಪರಿಷ್ಕಾರ, ಪಕ್ವತೆಗಳನ್ನು ನೀಡುತ್ತಿದ್ದವು. 

ಇದೇ ಸಮಯದಲ್ಲಿ ಶ್ರೀಛಾಯಪತಿಗಳು ಅ ಗುರುದಂಪತಿಗಳನ್ನು ಆಸ್ವಾದಿಸಿ ತಾವಷ್ತೇ ಸಂತಸಪಟ್ಟು ಸುಮ್ಮನಾಗುತ್ತಿರಲಿಲ್ಲ. ಬದಲಿಗೆ ರಾತ್ರಿ ಕುಳಿತು ಆಯಾ ದಿನಗಳ ಮಾತುಗಳನ್ನು ಲೇಖನಗಳನ್ನಾಗಿ ಬರೆದು ಮರುದಿನ ಶ್ರೀಗುರುವಿಗೆ ತೋರಿಸುತ್ತಿದ್ದರು. ಶ್ರೀಗುರುವು ಅವುಗಳನ್ನು ಪರಿಶೀಲಿಸಿ ತಿದ್ದುಪಡಿ ಇದ್ದರೆ ತಿದ್ದಿಸಿ ಊ.ಖಿ.S.ಖ. ಎಂದು ತಮ್ಮ ಹಸ್ತಾಂಕನವನ್ನು ಹಾಕಿಕೊಡುತ್ತಿದ್ದರಂತೆ. ಇದರಿಂದ ಶ್ರೀಗುರುವಿನ ವಾಗ್ವ್ಯಾಪರವು ಕೇವಲ ಗಾಳಿಮಾತಾಗದೆ. ದಾಖಲಾಗಿ ಉಳಿಯಲು ಉಪಕಾರವಾಯಿತು. ಮುಂದೆ ಶ್ರೀಮಂದಿರ ಶ್ರೀಗುರುವಿನ ಮಾತುಗಳನ್ನು ``ಆರ್ಯ ಸಂಸ್ಕೃತಿ ಮಾಸಪತ್ರಿಕೆಯಲ್ಲಿ ``ಶ್ರೀಗುರುವಾಣಿ ಎಂಬ ಶೀರ್ಷಿಕೆಯಲ್ಲಿಯೂ ಆಮೇಲೆ ಅವುಗಳನ್ನೆಲ್ಲ ಸಂಕಲಿಸಿ `ಅಮರವಾಣಿ ಸಂಪುಟಗಳನ್ನಾಗಿ ಪ್ರಕಾಶಪಡಿಸಿತು. ಈ ಪ್ರಕಾಶನಗಳಿಗೆ ಇನ್ನೂ ಹಲವಾರು ಭಕ್ತ-ಭಕ್ತೆಯರ ಕಾಣಿಕೆಗಳಿದ್ದರೂ ಶ್ರೀಛಾಯಾಪತಿಗಳ ಈ ಸೇವೆ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಅವರ ಈ ಲಿಪಿ ಸೇವೆ ಶ್ರೀಮಂದಿರಕ್ಕೂ ಭಕ್ತ ಸ್ತೋಮಕ್ಕೂ ಒಂದು ಅಮೂಲ್ಯ ಸಂಪತ್ತಾಯಿತು. 

ಆಮೇಲೆ ಶ್ರೀಛಾಯಾಪತಿಗಳು ವೃತ್ತಿ ಜೀವನಕ್ಕೆ ಅಡ್ಡಿಯಿಟ್ಟರು. ಮೊದಲು ಮೈಸೂರಿನ ‘ಸಾರ್ವಜನಿಕ ಪ್ರೌಡಶಾಲೆಯಲ್ಲಿ ಶಿಕ್ಷಿತರು, ಆಮೇಲೆ ಮೈಸೂರಿನ `ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ನಡೆಸಿದರು. ಆದರೂ ಮಧ್ಯೆ ಮಧ್ಯೆ ಕಾರ್ಯಕ್ರಮಗಳಿಗಾಗಿ ಅಥವಾ ಬಿಡುವು ದೊರೆತಾಗ ಹೆಡತಲೆಯ ಶ್ರೀಗುರುಗೃಹಕ್ಕೆ ಹೋಗಿಬರುತ್ತಲೇ ಇರುತ್ತಿದ್ದರು. ಮುಂದಿನ ದಿನಗಳಲ್ಲಿ ಪೂಜ್ಯ ಹಿರಿಯರಾಗಿದ್ದ ಶ್ರೀ ಓ. ಶ್ರೀಕಂಠರು ಪ್ರಧಾನ ಕಾರ್ಯದರ್ಶಿಗಳಾಗಿಯೂ, ಶ್ರೀಯುತರು ಉಪಕಾರ್ಯದರ್ಶಿಗಳಾಗಿಯೂ ಬಹುಕಾಲ ತಮ್ಮ ಸೇವೆ ಸಲ್ಲಿಸಿದರು. 

ಶ್ರೀಗುರುವು ಪ್ರಕಾಶಪಡಿಸಿರುವ `ಅಷ್ಟಾಂಗಯೋಗವಿಜ್ಞಾನಮಂದಿರಂ ಎಂಬ ಸಂಸ್ಥೆಯಲ್ಲಿ ಗುರುಭಕ್ತರು ಸೇರಿದ ಸಭೆಯಲ್ಲಿ ಅಂತೆಯೇ ಬಹಿರಂಗ ವೇದಿಕೆಯಲ್ಲಿ ಶ್ರೀಗುರುವಿನ ವಿಚಾರ ಸರಣಿಯನ್ನು ಪ್ರಸ್ತುತಪಡಿಸಲು ಶ್ರೀ ಗುರುವು 4-5 ಪ್ರವಚನಕಾರರನ್ನು ನಿಮುಕ್ತಿಗೊಳಿಸಿದ್ದರು. ಅವರಲ್ಲಿ ಆಗಲೇ ಕೆಲವು ಹಿರಿಯರಿದ್ದರು. ಅವರೊಡನೆ ಶ್ರೀ ಛಾಯಾಪತಿಗಳೂ ಆಮೇಲೆ ನಿಯುಕ್ತಿಗೊಂಡರು. ಆ ಪ್ರವಚನಕಾರರಲ್ಲಿ ಎಲ್ಲರೂ ತಮ್ಮಲ್ಲಿರುವ ಒಂದೊಂದು ವಿಶೇಷಾಂಶಗಳಿಂದ ಕೂಡಿ ವಾಕ್ ಸೇವೆ ಸಲ್ಲಿಸುತ್ತಾ ಶ್ರೀಗುರುವಿನ ವಿಚಾರಸರಣಿಯನ್ನು ಮಂದಿರದ ಗುರುಭಕ್ತರಿಗೂ ಆಸಕ್ತರಾದ ಹೊರಗಿನ ಜನರಿಗೂ ತಿಳಿಸಿ ಬೆಳಸುವ ಮಹತ್ವದ ಕಾರ್ಯವನ್ನು ಮಾಡಿರುವರು. ಈ ವಿಷಯದಲ್ಲಿಯೂ ಶ್ರೀ ಛಾಯಾಪತಿಗಳು ನಿಜಕ್ಕೂ ಸ್ಮರಣೀಯರು. ವಿದ್ಯಾರ್ಥಿದೆಸೆಯಿಂದಲೇ ವಿಚಾರ-ವಿಮರ್ಶೆ ಅಭಿವ್ಯಕ್ತಿಗಳ ಪ್ರತಿಭಾನ್ವಿತರಾದ ಶ್ರೀಯುತರು ಹಿರಿಯರಿಂದ ಸಾಕಷ್ಟು ವಿಷಯಗಳನ್ನು ಸಂಪಾದಿಸಿದ್ದಲ್ಲದೇ ನೇರವಾಗಿ ಶ್ರೀಗುರುವಿನಿಂದಲೇ ವಿಸ್ತಾರ ಪಾಠಗಳನ್ನು ಕೇಳಿದ್ದರಿಂದ, ಬರವಣಿಗೆಯನ್ನು ಮಾಡಿದ್ದರಿಂದ ಶ್ರೀಗುರುವಿನ ವಿಚಾರಸರಣಿಯ ಆಳ-ಅಗಲ ವ್ಯಾಪಕತೆಯನ್ನು ಚೆನ್ನಾಗಿ ತಿಳಿದವರಾಗಿದ್ದರು. 

ಅವರ ಪ್ರವಚನಗಳಲ್ಲಿ ಒಂದು ವಿಶೇಷತೆಯನ್ನು ಗುರುತಿಸುವಂತಿತ್ತು. ಅದೇನೆಂದರೆ ಮಂದಿರದ ಆಂತರಂಗಿಕ ಸಭೆಯಲ್ಲಿ ಗುರುಭಕ್ತರೇ ಇರುತ್ತಿದ್ದರಿಂದ ಅಲ್ಲಿ ಅತಿಯಾದ ತರ್ಕ ವಿಮರ್ಶೆಗಳು ಇರುತ್ತಿರಲಿಲ್ಲ. ಶ್ರೀಗುರುಭಕ್ತರ ಮತ್ತು ಅವರು ತಮ್ಮ ಭಕ್ತರಿಗೆ ಕರುಣಿಸಿರುವ ಸಾಧನಾಮಾರ್ಗದ ವಿಶೇಷತೆಗಳ ಬಗೆಗೆ ಹೆಚ್ಚು ಒತ್ತು ಇರುತ್ತಿತ್ತು. ಇದರಿಂದಾಗಿ ಅವರ ಆ ಪ್ರವಚನಗಳು ಮಂದಿರದ ಸಾಧಕಭಕ್ತರಿಗೆ ಶ್ರೀಗುರುದಂಪತಿಗಳ ಬಗ್ಗೆ ದೃಡವಾದ ಭಕ್ತಿಯನ್ನು ಹೊಂದಿ ಮಾಡಬೇಕಾಗಿರುವ ಸಾಧನೆಯಲ್ಲಿ ಅಚಲಶ್ರದ್ಧೆ, ಏಕನಿಷ್ಠೆಗಳು ಬೆಳೆಯಲು ಉಪಕಾರವಾಗಿರುತ್ತಿದ್ದವು. ಅವರ ಬಹಿರಂಗ ಪ್ರವಚನಗಳ ನಡೆ ಸ್ವಲ್ಪ ಭಿನ್ನವಾಗಿರುತ್ತಿದ್ದವು. ಅವರು ಅಲ್ಲಿ ಪ್ರವಚನದ ಅಂದಿನ ವಿಷಯ(topic)ವನ್ನು ಕುರಿತು ಇಂದು ಲೋಕದಲ್ಲಿ ಪ್ರಚಲಿತವಿರುವ ವ್ಯಾಪಕನೋಟ ತಪ್ಪದೆ ಇರುತ್ತಿತ್ತು. ಆ ಕುರಿತು ಪ್ರಚಲಿತವಾದ ದಾಖಲೆಮಾಡಿರುವ ಪ್ರಶ್ನೆಗಳಷ್ಟೇ ಅಲ್ಲದೆ ಋಷಿಗಳ (time and level) ಗಳಿಂದ ದೂರಾಗಿ ಇಂದಿನ ಮಟ್ಟಕ್ಕಷ್ಟೇ ಸೀಮಿತವಾಗಿ ಯೋಚಿಸಿಕೊಂಡು ಎಲ್ಲವನ್ನೂ ನಿರ್ಧರಿಸುವಾಗ ಇನ್ನು ಏನೇನು ಪ್ರಸ್ನೆಗಳು ಬುದ್ಧಿಯಲ್ಲಿ ಏಳಲು ಸಾಧ್ಯ ಎಂಬ ಜಿಜ್ಞಾಸೆಗಳಿಂದ ತುಂಬಿರುತ್ತಿದ್ದವು. ಹೀಗಾಗಿ ಬಹಿರಂಗ ಪ್ರವಚನಗಳು ವಿಸ್ತಾರವಾದ ಪೀಠಿಕೆಯನ್ನು ಹೊಂದಿಯೇ ಇರುತ್ತಿದ್ದವು. ಆಮೇಲೆ ಮುಂದುವರಿದು ಈ ಎಲ್ಲ ಪ್ರಶ್ನೆಗಳಿಗೆ ನಮ್ಮ ಆರ್ಷಸಾಹಿತ್ಯಗಳಲ್ಲಿಯೇ ಇರುವ ಉತ್ತರಗಳನ್ನು ಸಮಯೋಚಿತವಾಗಿ ನೀಡಿ ಅಲ್ಲಿಯೂ ಪರಿಹಾರ ಕಾಣದ ಜಿಜ್ಞಾಸುಗಳಿಗೆ ತಮ್ಮ ಅಂತರ್ದಶನದ ಹಿನ್ನೆಲೆಯಿಂದ ಶ್ರೀರಂಗ ಸದ್ಗುರುವು ದಯಪಾಲಿಸಿರುವ ಸಾರ್ವಕಾಲಿಕವಾಗಿ ಸಾರ್ವತ್ರಿಕವಾಗಿ ಎಲ್ಲರೂ ಒಪಲೇ ಬೇಕಾದ ಸಂತ್ಯಾಂಶಗಳನ್ನು ಮುಂದಿರಿಸುತ್ತಾ ಉಪಸಂಹಾರನೀಡುವ ಪರಿ ಎಂತಹ ಬುದ್ಧಿಜೀವಿಗಳನ್ನಾದರೂ ಮಣಿಸಿ ಋಷಿಪ್ರಜ್ಞೆಗಳಿಗೆ ತಲೆಬಾಗುವಂತೆ ಮಾಡುತ್ತಿದ್ದವು. ಹೀಗೆ ಶ್ರೀಮಂದಿರದ ವಿಚಾರಗಳನ್ನು ಬಹಿರಂಗ ಸಭೆಗಳಲ್ಲಿ ಪ್ರಭಾವೀ, ಪರಿಣಾಮಕಾರಿಯಾಗಿ ಇಡುವಲ್ಲಿ ಅವರು ಬಹು ಯಶಸ್ವಿಗಳಾಗಿದ್ದರು.

ಅವರ ಜೀವನದಲ್ಲಿ ಇನ್ನೊಂದು ವಿಶೇಷವೇನಂದರೆ ಅವರು ಕಾಲವನ್ನು ಬಿಡದೇ ಉಪಯೋಗಿಸಿಕೊಂದವರೇ ವಿನಹ ವ್ಯರ್ಥವಾಗಿ ಕಳೆದವರೇ ಅಲ್ಲ. ವೃಥಾ ಮಾತನ್ನಾಡುವುದು, ವ್ಯರ್ಥವಾದ ಮಾತನ್ನಾಡುವುದು ಅವರಲ್ಲಿರಲಿಲ್ಲ. ಅವರು ಕಾಲೇಜಿಗೆ ಹೋಗುವ ಮುನ್ನ, ಹೋಗಿಬಂದಮೇಲೆ ಯಾವುದಾದರೂ ಹುಡುಗರೊಂದಿಗೆ ವಿಚಾರ-ವಿಮರ್ಶೆ ಅಥವಾ ಓದು-ಬರವಣಿಗೆ ಮಾಡುತ್ತಿದ್ದರು. ಮನೆಯ ಜವಾಬ್ದಾರಿಯನ್ನು ಅವರ ಶ್ರೀಮತಿಯವರೇ ಮಾಡುತ್ತಿದ್ದರು. ಈ ಬಗ್ಗೆ ಶ್ರೀಯವರು ತಲೆ ಹಾಕುವುದು ಕಡಿಮೆ. ಅವರಿಗೆ ಸಂತಾನಭಾಗ್ಯ ಇರಲಿಲ್ಲ. ಆ ಬಗ್ಗೆ ಅವರು ಬೇಸರ ಮಾಡಿಕೊಂಡಿದ್ದಿಲ್ಲ. ಬದಲಿಗೆ ತಮ್ಮ ಬಂಧುವರ್ಗದ ಎಷ್ಟೋ ಹುಡುಗರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಅವರ ಓದಿಗೆ ನೆರವಾಗಿ ಅವರೆಲ್ಲಾ ಒಂದೊಂದು ದಾರಿ ಸಾಗಲು ಉದ್ದಕ್ಕೂ ಆಸರೆಯಗಿರುತ್ತಿದ್ದರು. ಅವರೆಲ್ಲಾ ಇವರನ್ನ ಇವರ ಶ್ರೀಮತಿಯವರನ್ನು ಸ್ವಂತ ತಂದೆತಾಯಿಗಳಂತೆ ಭಾವಿಸುತ್ತಿದ್ದರು. ಹೀಗಾಗಿ ಇವರ ಮನೆ ಬಂಧುಬಾಂಧವರಿಂದ ಬಂದು ಹೋಗುವ ಜನಗಳಿಂದ ಯಾವಾಗಲೂ ತುಂಬಿರುತಿದ್ದಿತ್ತು. 

ಲಕ್ಶ್ಮೀಪುರಂನಲ್ಲಿರುವ ಶ್ರೀಮಂದಿರದ ಹಿಂದುಗಡೆ ಮಂದಿರದ್ದೇ ಆದ ಎರಡು ಚಿಕ್ಕ ಮನೆ (out-house) ಗಳಿದ್ದವು. ಅವುಗಳಲ್ಲಿ ಒಂದು ಮನೆಯಲ್ಲಿ ಇವರಿದ್ದರು. ಶ್ರೀಮಂದಿರಕ್ಕೆ ಬಂದುಹೋಗುವವರಿಗೆ ಅದು ಆಶ್ರಮವಾಗಿತ್ತು. ಕಾರ್ಯಕ್ರಮಗಳಿಗೂ ದೂರದೂರದಿಂದ ಬರುವ ಗುರುಭಕ್ತರಿಗೂ ವಿಶೇಷವಾಗಿ ಸಿರ್ಸಿ-ಸಾಗರ ಕಡೆಯಿಂದ ಬರುವವರಿಗೆ ಕಾರ್ಯಕ್ರಮಕ್ಕೆ ಮೊದಲೇ ಬಂದು ಆಮೇಲೆಯೂ ಕೆಲದಿನಗಳು ಉಳಿದು ಮಧ್ಯಂತರದಲ್ಲಿ ಜರಗಿದ ಪ್ರವಚನಗಳ, ಗಾನಗಳ ಧ್ವನಿಮುದ್ರಿಕೆಗಳನ್ನೆಲ್ಲಾ ಕೇಳಿಕೊಡು ಹೋಗುವ ಉತ್ಸಾಹ ಇರುತ್ತಿತ್ತು. ಆಗೆಲ್ಲಾ ಛಾಯಾಪತಿಗಳ ಪತ್ನಿ ಶ್ರೀಮತಿ ಸಾವಿತ್ರಮ್ಮ, ಅಕ್ಕ ಶ್ರೀಮತಿ ಜಯಮ್ಮ ಇವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಅತೀವ ಉತ್ಸಾಹ ಸಡಗರಗಳಿಂದ ಆದರಿಸುವ ಪರಿ ಮರೆಯಲಾರದ್ದು. ಆ ಮಧ್ಯದಲ್ಲಿಯೇ ಅವರಿಗೆ ಶ್ರೀ ಛಾಯಾಪತಿಗಳು ಯಾವುದಾದರೂ ವಿಷಯವನ್ನು ಕುರಿತು ಮಾತುಕತೆಗಳನ್ನಾಡುವುದು ಇರುತ್ತಿತ್ತು. ಹೀಗೆ ಶ್ರೀಛಾಯಾಪತಿಗಳ ಜೀವನ ಶ್ರೀಗುರುವಿಗಾಗಿ, ಶ್ರೀಗುರುಮಂದಿರಕ್ಕಾಗಿ ಸಮರ್ಪಿತ (devoted) ಜೀವನವಾಗಿತ್ತು. ಅವರು ಯಾವಾಗಲೂ ತಮ್ಮ ಗುರುವಿಗೆ ಹೇಳಿ/ಕೇಳಿ ಬರಬೇಕೆಂದು ಆಶಿಸುತ್ತಿದ್ದರು. ಹಾಗೂ ಅವರ ಪ್ರವಚನ/ಲೇಖನಗಳ ಕಡೆಯಲ್ಲಿ ಯಾವಾಗಲೂ ಗುರುಸ್ಮರಣೆ ಮಾಡಿ ಶ್ರೀಗುರುವಿಗೆ ಕೃತಜ್ಞತೆಗಳನ್ನು ಅರ್ಪಿಸುವುದನ್ನು ಮರೆಯುತ್ತಿರಲಿಲ್ಲ. 

ಅವರು ನಿರ್ಯಾಣ ಹೊಂದುವಾಗಲೂ ಅವರ ಆರೋಗ್ಯದ ಸ್ಥಿತಿ ತೀರ ಹದಗೆಟ್ಟಾಗ ಒಂದು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯ ಬೇಕಾಯ್ತು. ವಾಹನ ಮಂದಿರದ ಹಿಂದುಗಡೆಯಿಂದ ಮಂದಿರದ ಮುಂದು ಬಂದೊಡನೆಯೇ ಸ್ವಲ್ಪಕಾಲ ನಿಲ್ಲಿಸಿ ತಾವು ಭಗವಂತ ಸ್ಮರಣೆಯಲ್ಲಿದ್ದು ಭಕ್ತಿಯಿಂದ ಶ್ರೀಮಂದಿರಕ್ಕೆ ಕೈಜೋಡಿಸಿ ನಮಸ್ಕರಿಸಿದ ನಂತರ ವಾಹನ ಮುಂದಕ್ಕೆ ಸಾಗಿತು. ಶ್ರೀಗುರುಸ್ಮರಣೆಯಲ್ಲಿಯೇ ಜೀವನವನ್ನು ಮುಗಿಸಿಕೊಂಡು ಸಾಗಿರುವುದು ಅವರ ಕಳೇಬರವನ್ನು ನೋಡಿದವರಿಗೆಲ್ಲಾ ಸುಸ್ಪಷ್ಟವಾಗಿ ಗೋಚರವಾಗುತ್ತಿತ್ತು. 

ಅವರು 14.9.1987 ಅಂದು ಭಗವಂತನ ಪಾದವನ್ನು ಸೇರಿದರು. ಅಂದು ಮೈಸೂರಿನಲ್ಲಿ ಸಂಜೆ ಪ್ರಕಟವಾಗುವ ಸಾಧ್ವೀ ಪತ್ರಿಕೆಯ ಸಂಪಾದಕರಾದ ಶ್ರೀ ಅಗರಂ ರಂಗೈಯನವರು ತಮ್ಮ ಪತ್ರಿಕೆಯಲ್ಲಿ “ಈ ದಿನ ಶ್ರೀರಂಗಮಹಾಗುರುಗಳ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾದ ಶ್ರೀಛಾಯಾಪತಿಗಳು ದೈವಾಧೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ” ಎಂದು ಪ್ರಕಟಿಸಿದ್ದರು. ಇದು ಅವರ ಗುರುಭಕ್ತಿ ಮತ್ತು ಅವರ ಗುರುನಿಷ್ಠೆಯನ್ನು ಸಾರುತ್ತದೆ.

ನಿಷ್ಠಾವಂತ ಗುರುಭಕ್ತರಾಗಿ, ಸ್ಪೂರ್ತಿದಾಯಿ ಪ್ರವಚನಕಾರರಾಗಿ ಸುಪರಿಷ್ಕೃತ ಲೇಖಕರಾಗಿ ಶ್ರೀಛಾಯಾಪತಿಗಳು ಶ್ರೀಮಂದಿರದಲ್ಲಿ ಚಿರಸ್ಮರಣೀಯರು.
ಸಂಗ್ರಾಹಕರು: ಎ. ಕೃಷ್ಣಮೂರ್ತಿ
(ಪ್ರತಿಕ್ರಿಯಿಸಿರಿ lekhana@ayvm.in)
  
ಪೂಜ್ಯ ಶ್ರೀರಾಮಕೃಷ್ಣ ಗುರುದಾಸರು
  ಧನ್ಯಜೀವಿತದ ಕಾಲ 1926 ರಿಂದ 1978.  


ಶ್ರೀ ರಾಮಕೃಷ್ಣಭಟ್ಟರು ಬಸರೀಕಟ್ಟೆಯ ಶ್ರೀಲಕ್ಷ್ಮೀಕಾಂತ ಜನಾರ್ದನಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿದ್ದ ವೇ||ಬ್ರ|| ಶ್ರೀ ವೇಂಕಟರಮಣಭಟ್ಟರು ಮತ್ತು ಶ್ರಿಮತಿ ಕಾವೇರಮ್ಮನವರ ಸುಪುತ್ರರಾಗಿ ಶ್ರೀಅಕ್ಷಯ ನಾಮ ಸಂವತ್ಸರದ ಶ್ರಾವಣ ಬಹುಳ ಚತುರ್ದಶೀ ದಿನಾಂಕ 06-09-1926ರಂದು ಜನಿಸಿದರು. ಇವರಿಗೆ ಒಬ್ಬ ಅಣ್ಣ ಮತ್ತು ಐದು ಮಂದಿ ತಂಗಿಯರು.

ಶ್ರಿರಾಮಕೃಷ್ಣ ಭಟ್ಟರು ನಮ್ಮ ಕಣ್ಮುಂದೆಯೇ ಇದ್ದು ತಂಬೂರಿಯನ್ನು ಮೀಟಿಕೊಂಡು ಭವಾಬ್ಧಿಯನ್ನು ಮಹಾಗುರುವಿನ ಅನುಗ್ರಹದಿಂದ ತಾವು ದಾಟಿ, ಬಹು ಜನರಿಗೆ ಭವಾಬ್ಧಿಯನ್ನು ದಾಟಿಸುವ ಮಹಾ ನಾವಿಕನಾದ ಸದ್ಗುರುವಿನೆಡೆಗೆ ಒಯ್ದವರು. ಅವರೊಬ್ಬ ಅಪೂರ್ವ ಅದ್ಭುತ ಗಾಯಕರಾಗಿದ್ದರು. ಯೋಗ ಗಾಯನವನ್ನು ಬಲ್ಲವರಾಗಿದ್ದರು. ಅವರ ಸಂಗೀತವನ್ನು ಕೇಳಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬರುತ್ತಿದ್ದರು. ಅವರ ಸಂಗೀತವನ್ನು ಕೇಳುತ್ತಾ ಕೇಳುತ್ತಾ ತಡೆಯಲಾರದೆ ಆನಂದೊನ್ಮಾದದಿಂದ ಎಷ್ಟೋ ಮಂದಿ ನರ್ತಿಸಿದ್ದೂ ಉಂಟು.

ಶ್ರೀರಾಮಕೃಷ್ಣಭಟ್ಟರು ಸಂಸ್ಕೃತ, ಜ್ಯೋತಿಷ್ಯ ಮತ್ತು ಸಂಗೀತದಲ್ಲಿ ವಿದ್ವಾಂಸರು. ವಿಶೇಷವಾಗಿ ಸಂಗೀತದಲ್ಲಿ ಸಾಧನೆ ಮಾಡಿದವರು. ಸಂಗೀತವನ್ನು ಸಾಧಿಸಿ ತಮ್ಮ ಜ್ಞಾನದಾತರೂ, ಜ್ಞಾನವಿಜ್ಞಾನತೃಪ್ತಾತ್ಮರೂ, ನಾದಯೋಗಿಗಳೂ ಆಗಿದ್ದ ಶ್ರಿರಂಗಮಹಾಗುರುಗಳಿಗೆ ಸಮರ್ಪಿಸಿ, ಗುರುಗಳಿಂದಲೇ 'ಗುರುದಾಸರು' ಎಂಬ ಅಭಿದಾನವನ್ನು ಪಡೆದ ಧನ್ಯಾತ್ಮರು. ಮಹಾಗುರುಗಳು ಗುರುದಾಸರನ್ನು ಉದ್ದೇಶಿಸಿ 'ಇವರದು ಗಂಧರ್ವ ಕಂಠವಪ್ಪಾ. ಇವರು ಗಂಧರ್ವಗಾಯನ ಮಾಡುತ್ತಾರೆ' ಎಂದು ಶಿಷ್ಯರೊಬ್ಬರಿಗೆ ಹೇಳಿದ್ದರು.

  

ಶ್ರೀ ರಾಮಕೃಷ್ಣ ಭಟ್ಟರಿಗೆ ಸಿನಿಮಾರಂಗದಲ್ಲಿ ಬಹು ಬೇಡಿಕೆಯಿತ್ತು. ಲಕ್ಷ ಲಕ್ಷ ಸಂಪಾದನೆ ಮಾಡುವಷ್ಟು ಕಲಾಪ್ರೌಡಿಮೆಯೂ ಇವರಲ್ಲಿತ್ತು. ಹಿನ್ನೆಲೆ ಗಾಯಕರಾಗಲು ಬಹಳ ಒತ್ತಾಯವೂ ಇತ್ತು. ನಟನೆಯೂ ಚೆನ್ನಾಗಿ ಸಿದ್ಧಿಸಿತ್ತು. ಸಾಧಾರಣ ಸ್ಥಿತಿವಂತರಾಗಿದ್ದವರಿಗೆ ಈ ಆಮಿಷ ಬಹಳ ಆಕರ್ಷಣೀಯವೂ ಆಗಿದ್ದಿತು. ಇವರಿಗೆ ಸಿನಿಮಾರಂಗದ ಹಲವು ಪ್ರತಿಷ್ಠಿತ ವ್ಯಕ್ತಿಗಳ, ಸಿನಿಮಾ ನಟರ ನಿಕಟ ಪರಿಚಯವಿತ್ತು. ಚಿತ್ರಸಾಹಿತಿ ಕರೀಂಖಾನ್, ನಟ-ನಿರ್ದೇಶಕ-ನಿರ್ಮಾಪಕರಾದ ನಾಗೇಂದ್ರರಾಯರು, ಹೊನ್ನಪ್ಪ ಭಾಗವತರು ಮುಂತಾದವರು ಇವರ ಗಾನಪಾಂಡಿತ್ಯವನ್ನೂ ನಟನಾ ಸಾಮರ್ಥ್ಯವನ್ನೂ ಬಲ್ಲವರಾಗಿದ್ದರು. ಸುಂದರ ಶರೀರ ಮತ್ತು ಶಾರೀರ ಹೊಂದಿದ್ದ ಇವರು ನಟನೆಯೊಡನೆ ಗಾಯನವನ್ನೂ ಮಾಡುತ್ತಿದ್ದರು. ಇವರ ನಟನಾ ಸಾಮರ್ಥ್ಯವನ್ನು ನೋಡಿ ಮುಗ್ಧರಾದ ಮದರಾಸಿನ ಸಿನಿಮಾರಂಗದವರು ಇವರಿಗೆ ಕೈತುಂಬಾ ಸಂಬಳ, ವಾಸ್ತವ್ಯದ ಏರ್ಪಾಡು-ಸವಲತ್ತುಗಳನ್ನು ಕೊಡಲು ಸಿದ್ಧರಾಗಿದ್ದರು. ಇಷ್ಟೆಲ್ಲಾ ಹಿನ್ನಲೆಯಿದ್ದ ಇವರು ತಮಿಳುನಾಡಿಗೆ ಸಿನಿಮಾ ಪ್ರಪಂಚಕ್ಕೆ ಧುಮುಕಲು ಸಿದ್ಧರಾಗಿದ್ದರು.  

ಮೈಸೂರಿನ ಮಹಾರಾಜಾ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾಗ, 'ಗುರುದಾಸರು ಕಾಲಿದಾಸನ ಶಾಕುಂತಲಾ ನಾಟಕದಲ್ಲಿ ಮಾಡಿದ ದುಷ್ಯಂತನ ಪಾತ್ರವನ್ನೂ, ಭಾಸನ ಪ್ರತಿಮಾ ನಾಟಕದಲ್ಲಿ ಶ್ರೀರಾಮನ ಪಾತ್ರವನ್ನೂ ನೋಡಿದವರು ಯಾರೂ ಅವರನ್ನು ಮರೆಯುವ ಹಾಗಿಲ್ಲ. ಶ್ರೀರಾಮಕೃಷ್ಣಭಟ್ಟರು ಸಾಹಿತ್ಯ, ಸಂಗೀತ, ಪಾತ್ರಗಳರೂಪ, ವೇಷಭೂಷಣಗಳ ಅಭಿರೂಪ್ಯ, ಅಭಿನಯ ಕಲೆ ಎಲ್ಲದರಲ್ಲೂ ಅದ್ವಿತೀಯರಾಗಿದ್ದರು' ಎಂದು ಅದೇ ಪಾಠಶಾಲೆಯಲ್ಲಿ ಆಗ ಅಧ್ಯಯನ ಮಾಡುತ್ತಿದ್ದ ಶ್ರೀ ಶ್ರೀ ರಂಗಪ್ರಿಯ ಶ್ರೀಗಳು ನೆನೆಪಿಸಿಕೊಳ್ಳುತ್ತಿದ್ದರು. ಶ್ರೀ ರಂಗಪ್ರಿಯ ಶ್ರೀಗಳ ಸತ್ಸಂಗದಿಂದ ಗುರುದಾಸರಿಗೆ ಶ್ರೀರಂಗಮಹಾಗುರುಗಳ ಪರಿಚಯವಾಯಿತು. ಅದು ಅವರಿಗಿದ್ದ ಪ್ರಚಾರ, ಪ್ರಸಿದ್ಧಿ, ಪುರಸ್ಕಾರ ಇತ್ಯಾದಿ ಆಮಿಷಗಳ ಬಗ್ಗೆ ಆಳವಾಗಿ ಚಿಂತಿಸುವಂತೆ ಮಾಡಿತು. ಜೀವನದ ಪರಮಗುರಿ ಆತ್ಮಸಾಕ್ಷಾತ್ಕಾರ ಎಂಬ ಅರಿವು ಆಳವಾಗಿ ಬೇರೂರಿತು. ಇದರ ಫಲವಾಗಿ ಗುರುದಾಸರು ತಮಗಾಗಿ ಗೊತ್ತುಪಡಿಸಿದ್ದ ಸಂಭಾವನೆ, ಹೋಟೆಲು, ಸ್ಟುಡಿಯೋ ಸಂಪತ್ತು ಎಲ್ಲವನ್ನೂ ನಿರಾಕರಿಸಿದರು. ಗುರುಭಕ್ತರಾಗಿಯೇ ಉಳಿಯುವುದರಲ್ಲೇ ಧನ್ಯತೆಯನ್ನು ಕಂಡರು. ಇದು ತ್ಯಾಗರಾಜರು 'ನಿಧಿಚಾಲಸುಖಮಾ' ಎಂದು ಹಾಡಿದ ಘಟನೆಯನ್ನು ನೆನೆಪಿಗೆ ತರುತ್ತದೆ. ನಿರಂತರ ಸಾಧನೆಯಿಂದ ಪರಮಗುರುವಿನ ಅನುಗ್ರಹದಿಂದ ರಾಗರಾಗಿಣಿಯರ ಸಾಕ್ಷಾತ್ಕಾರ ಪಡೆದರು.

ಅವರದು ಕಂಚಿನ ಕಂಠ. ಅವರು ಹಾಡುವಾಗ ನೂರಾರು ಜನರಿರುವ ಭಕ್ತರ ಸಭೆಗೆ ಧ್ವನಿವರ್ಧಕದ ಅಗತ್ಯವೇ ಇರುತ್ತಿರಲಿಲ್ಲ. ಅವರು ಭಕ್ತರ ಮನೆಯಲ್ಲಿ ಹಾಡುತ್ತಿದ್ದಾಗ ಅವರ ಕಂಠದ ಆಕರ್ಷಣೆಗೆ ಜನರು ತಾವಾಗೆ ಬಂದು ಸದ್ದಿಲ್ಲದೆ ನಿಂತೊ ಕುಳಿತೊ ಆಲಿಸುತ್ತಿದ್ದರು. ಅವರು ಹಾಡುವಾಗ ಗೋಕುಲವು ಧರೆಗಿಳಿಯುತ್ತಿತ್ತು. ಕೃಷ್ಣನ ಸಾನ್ನಿಧ್ಯ ಹಾಗೂ ಕೃಷ್ಣ ವಿರಹದ ಬೇಗೆ ಎರಡೂ ಉಂಟಾಗುತಿತ್ತು. ಕೃಷ್ಣನ ಸಾನ್ನಿಧ್ಯವನ್ನು ಅನುಭವಿಸಿದವರು ಎಷ್ಟೋ ಮಂದಿ. ಸತತ ಸಾಧನೆ ಮತ್ತು ಪರಮ ಗುರುವಿನ ಅನುಗ್ರಹದಿಂದ ಸುಲಲಿತವಾಗಿ ಯೋಗ ಚಕ್ರಗಳಲ್ಲಿ ಸಂಚಾರಮಾಡುತ್ತಿದ್ದರು. ಅವರು 'ಆತ್ಮದೀಪಂ' 'ಸ್ವಧಾಮ್ನಾಂ' ಮುಂತಾದ ಪದಗಳನ್ನು ಹಾಡುತ್ತಿರುವಾಗ ಆ ಪದವನ್ನು ಅನುಭವಿಸಿ ಮುಳುಗಿ ಮುಳುಗಿ ಯೋಗ ಗಾಯಕರಾಗಿ ಹಾಡುತ್ತಿದ್ದರು.ಯೌಗಿಕ ಪದಗಳನ್ನು ಹಾಡುತ್ತಿರುವಾಗ ಆಯಾ ಯೋಗ ಚಕ್ರಗಳಲ್ಲೇ ನೆಲೆಸಿ ಹಾಡುತ್ತಿದ್ದರು. ಇಂತಹ ದೈವೀಗಾಯನ ಪ್ರವೃದ್ಧಿಗೆ ಬಂದದ್ದು ಶ್ರೀರಂಗಮಹಾಗುರುಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಿಂದ. ಅವರಿಗೆ ಗುರುದೇವರು 'ಸ್ತೋತ್ರದ ಒಂದು ಸಾಹಿತ್ಯದ ಮೂಲಕ ಭಗವಂತನನ್ನು ನೋಡಬಹುದಪ್ಪಾ. ಎಲ್ಲಾ ಅರವತ್ನಾಲ್ಕು ಕಲೆಗಳ ಗುರಿಯೂ ಇದೇ ಆಗಿದೆ. ನಿನಗೆ ಅದರ ಮರ್ಮವನ್ನು ಸಂಗೀತದ ಮೂಲಕ ಹೇಳಿಕೊಟ್ಟಿದ್ದೇನೆ' ಎಂದು ಆಶೀರ್ವದಿಸಿದ್ದರು.

ಗುರುದಾಸರು, 'ನಿಸರ್ಗವು ನಾದಮಯವಾಗಿದೆ, ಸಂಗೀತಮಯವಾಗಿದೆ. ಪ್ರತಿಯೊಂದು ವಾತಾವರಣಕ್ಕೂ ರಾಗವಿದೆ' ಎಂದು ಹೇಳುತ್ತಿದ್ದರು. ಸಂಗೀತ ಶಾಸ್ತ್ರದಲ್ಲೂ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ರಾಗಗಳನ್ನು ಅನುಮೋದನೆ ಮಾಡಿರುತ್ತಾರೆ. 'ಶಾಸ್ತ್ರವು ವೈಜ್ಞಾನಿಕವಾಗಿದೆ. ಪ್ರಯೋಗದಿಂದ ಅದನ್ನು ಸಿದ್ಧಪಡಿಸಬಹುದು. ಪ್ರಯೋಗಕ್ಕೆ ಬರದಿದ್ದರೆ ಅದೆಂತಾ ಶಾಸ್ತ್ರ?' ಎಂದು ಮಹಾಗುರುಗಳು ಹೇಳುತ್ತಿದ್ದರು. ಅವರು ವಾತಾವರಣಕ್ಕೆ ಅನುಸಾರವಾಗಿ ಬೀಸುವ ಗಾಳಿ, ಬೆಳಕು ಮತ್ತು ಆಗಿನ ರಸಕ್ಕೆ ಅನುಗುಣವಾಗಿ ರಾಗಗಳನ್ನು ಯೋಜಿಸುತ್ತಿದ್ದರು. ಇದರ ವಿಜ್ಞಾನವನ್ನು ಗುರುದಾಸರು ಮಹಾಗುರುಗಳಿಂದ ಪಡೆದಿದ್ದರು. ಉದಾಹರಣೆಗೆ ಮಹಾಗುರುಗಳು ಹಾಡುತ್ತಿದ್ದ ಭಜಗೋವಿಂದ ಸ್ತೋತ್ರದ 'ನಳಿನೀದಲಗತ ಜಲಮತಿತರಲಂ' ಎಂಬ ಸ್ತೋತ್ರಕ್ಕೆ ಗುರುಗಳು ಏಕೆ ಬಿಲಹರಿ ರಾಗ ಹಾಕಿದ್ದಾರೆ ಎಂಬುದನ್ನು ನೆನೆಸಿಕೊಂಡು ಭಾವುಕರಾಗುತ್ತಿದ್ದರು. ಬಿಲಹರೀ ಪ್ರಾತಃಕಾಲದ ರಾಗ. ಆಗ ಎಲೆಗಳ ಮೇಲೆ ನೀರಿನ ಬಿಂದುಗಳು ನಿಂತಿರುತ್ತವೆ. ಆ ರಾಗವು 'ದಲಗತಜಲಮ್'ಗೆ ಹೇಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಭಾವಪುಷ್ಟಿಯನ್ನು ಕೊಡುತ್ತದೆ ಎಂದು ಅನುಭವಿಸುತ್ತಾ ಭಾವುಕರಾಗಿ ಹೇಳುತ್ತಿದ್ದರು. ಮಹಾಗುರುಗಳು ಗುರುದಾಸರಿಗೆ ಈ ರೀತಿ ಅನೇಕ ಪಾಠಗಳನ್ನು ಮಾಡಿದ್ದಾರೆ.

ಗುರುದಾಸರು ಮಾಡುತ್ತಿದ್ದ ಸ್ತೋತ್ರಗಾನವನ್ನು ಅವರ ಸಾನ್ನಿಧ್ಯದಲ್ಲೇ ಆಲಿಸಿದವರಿಗೆ ಅದರ ರಸ ಮತ್ತು ಸೊಬಗು ಅರಿವಾಗುತ್ತಿತ್ತು. ಹೆಸರಾಂತ ಕವಿ ಶಿವರುದ್ರಪ್ಪನವರ ಭಾವಗೀತೆಗಳನ್ನು ಗುರುದಾಸರು ಭಾವಪೂರ್ಣವಾಗಿ ಹಾಡುತ್ತಿದ್ದರು. ಗುರುದಾಸರು ಬಹು ಅಪರೂಪದ ಯೋಗ ಗಾಯಕರು. ಅವರು ಸಂಗೀತವನ್ನು ಕೇವಲ ಭಗವಂತನ ಸೇವೆಗಾಗಿಯೇ ವಿನಿಯೋಗಿಸಿದರು.  ಅವರ ಜೀವನದಲ್ಲಿ ಬಹಳವಾಗಿ ಹಣಕಾಸಿನ ತೊಂದರೆಗೆ ಒಳಗಾದರೂ ಸಂಗೀತವನ್ನು ಹಣಸಂಪಾದನೆಗೆ ಬಳಸಿಕೊಳ್ಳಲಿಲ್ಲ. ಇದು ಅವರ ಒಂದು ಮುಖ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಸರೀಕಟ್ಟೆಯ ಸುತ್ತಮುತ್ತ ಇರುವ ಹಳ್ಳಿಗಾಡಿನಲ್ಲಿ ಬಡವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲದಿದ್ದಾಗ, ಅದೂ ಹೆಣ್ಣುಮಕ್ಕಳ ವಿದ್ಯಾಭ್ಯಾಸವೇ ಅಸಾಧ್ಯವಾಗಿದ್ದಾಗ ಅಲ್ಲಿ 'ಶ್ರೀಸದ್ಗುರುವಿದ್ಯಾಶಾಲೆ' ಎಂಬ ವಸತಿಶಾಲೆಯನ್ನು ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ತೆರೆದು, ಪ್ರಾಚೀನ ಗುರುಕುಲ ಪದ್ಧತಿಯಂತೆ ವಾತ್ಸಲ್ಯಪೂರಿತವಾದ ಮನೋಭಾವದಿಂದ ಮಕ್ಕಳನ್ನು ಬೆಳಸಿ ಅವರ ಜೀವನವನ್ನು ರೂಪಿಸುವುದರಲ್ಲಿ ಮಹಾಪಾತ್ರವಹಿಸಿ ಜ್ಞಾನದಾನ ಮಾಡಿದ ಸಾಹಸಿಗಳಾದ ಪುಣ್ಯಾತ್ಮರು. ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಸ್ತೋತ್ರಾದಿಕಲೆಗಳೂ, ಸಂಸ್ಕೃತ, ಹಿಂದಿ ಭಾಷೆಗಳೂ, ಧರ್ಮ, ಸಂಪ್ರದಾಯ, ಸಂಸ್ಕೃತಿ ಹಾಗೂ ದೈಹಿಕ ಶಿಕ್ಷಣಗಳ ಸುಂದರ ಸಮನ್ವಯಾತ್ಮಕವಾದ ವಿದ್ಯಾಪದ್ಧತಿಯನ್ನು ರೂಪಿಸಿದ್ದರು. ಈ ಶಾಲೆಯ ಕಾರ್ಯಕ್ಷೇತ್ರದಲ್ಲಿ ಇವರ ಧರ್ಮಪತ್ನಿ ಕಲ್ಯಾಣಮ್ಮ ಮತ್ತು ಅತ್ಯಂತ ಕ್ರಿಯಾಶೀಲರಾಗಿದ್ದ ದಿವಂಗತ ಶ್ರೀಜಿ.ಕೆ.ಶಂಕರರಾಯರ ಸಮರಸ ಸಹಯೋಗವನ್ನು ಮರೆಯುವಂತಿಲ್ಲ.

ಗುರುದಾಸರು ಉತ್ತಮ ಶಿಕ್ಷಣ ತಜ್ಞರು, ನಾಟಕ-ಗೀತ ರಚನಕಾರರು, ಅದ್ಭುತ ನಟರು ಮತ್ತು ಉತ್ತಮ ನಿರ್ದೇಶಕರು. ಊರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ನುಡಿಸಲು ಮಕ್ಕಳಿಗೆ ಚಂಡೆ, ಮೃದಂಗ, ಖಂಜಿರ ಮುಂತಾದ ತಾಳವಾದ್ಯಗಳನ್ನೂ ಕಲಿಸುತ್ತಿದ್ದರು. ಅವರು ರಚಿಸಿದ ದೇಶಭಕ್ತಿಗೀತೆ 'ಬೆಳಗಲೀ ಬೆಳಗಲೀ ಸನಾತನಾರ್ಯ ಭಾರತ' ಎಂಬುದು ಭಾರತದ ರಾಷ್ಟ್ರಗೀತೆಯಾಗುವ ಯೋಗ್ಯತೆಯನ್ನು ಹೊಂದಿದೆ.

ಶ್ರೀಗುರುದಾಸರು ಸರಳಸಜ್ಜನರು, ದೈವಭಕ್ತರು. ಧ್ಯಾನಶೂರರು ಮತ್ತು ದೈವದ ಸ್ವತ್ತಾಗಿದ್ದರು. ಜ್ಞಾನಪಿಪಾಸುಗಳಿಗೆ ತಿಳುವಳಿಕೆ ನೀಡಿ, ಆರ್ದ್ರರಾದವರಿಗೆ ಗುರುದ್ವಾರವಾಗಿ ಕೆಲಸ ಮಾಡಿದವರು. ಅತಿಥಿ ಸತ್ಕಾರವನ್ನು ಆದರದಿಂದ ಮಾಡುತ್ತಿದ್ದರು. ಅವರು ಉತ್ತಮ ಬಾಣಸಿಗರೂ ಆಗಿದ್ದರು. ಅವರ ಆತಿಥ್ಯವನ್ನು ಸವಿದ ಅತಿಥಿಗಳು ಇನ್ನೂ ಅದರ ರುಚಿಯನ್ನು ಮರೆತಿಲ್ಲ. ಅವರು ಸುತ್ತಮುತ್ತಲಿನ ಹಳ್ಳಿಗಳಿಗೆ, ಬಂಧುಗಳ ಮನೆಗೆ ನಡೆದೇ ಹೋಗುತ್ತಿದ್ದರು. ಅವರು ಅಲ್ಲಿರುವವರೆಗೂ ಸಮಯದ ಸದುಪಯೋಗ ಹೇಗೆ ಮಾಡಿಕೊಳ್ಳಬೇಕೆಂಬುದನ್ನು ಮೊದಲೇ ನಿರ್ಧರಿಸಿರುತ್ತಿದ್ದರು. ಅಲ್ಲಿರುವವರಿಗೆ ಜೀವನದ ಗುರಿ, ಅಧ್ಯಾತ್ಮಿಕತೆಯ ಕಡೆಗೆ ಒಲವು ಉಂಟಾಗುವಂತೆ ತಿಳುವಳಿಕೆ ನೀಡುತ್ತಿದ್ದರು.
ಅವರಿಗೆ ಪಾರಂಪರಿಕವಾಗಿ ಬಂದ ಆಸ್ತಿಗಳಾವುದನ್ನೂ ಇಟ್ಟುಕೊಳ್ಳಲಿಲ್ಲ. ಅವರ ಅಣ್ಣನವರಿಗೆ 'ನನಗೆ ಭೂಮಿಕಾಣಿ ಯಾವುದೂ ಬೇಡ. ನನಗೆ ಬರಬೇಕಾಗಿರುವ ಭೂಮಿಯನ್ನು ಧ್ಯಾನ ಮಂದಿರದ ಕಟ್ಟಡಕ್ಕೆ ಬಿಟ್ಟುಕೊಡಬೇಕು' ಎಂದು ತಾಕೀತು ಮಾಡಿದರು. ಅದರಂತೆಯೇ ಅವರ ಅಣ್ಣನವರಾದ ಹರಿದಾಸರು ಆ ಭೂಮಿಯನ್ನು ತುಲಸೀ ತೀರ್ಥದೊಡನೆ ಧಾರೆ ಎರೆದುಕೊಟ್ಟರು.

ಶ್ರೀಗುರುದಾಸರು ಮಹಾಗುರುಗಳ ನಿರ್ದೇಶನದಂತೆ ಶ್ರೀಸದ್ಗುರು ವಿದ್ಯಾಶಾಲೆಯ ಮುಂದುವರಿಕೆಯಾಗಿ ಶ್ರೀಸದ್ಗುರು ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಪ್ರಥಮಾಧ್ಯಕ್ಷರಾಗಿದ್ದರು. ಅದು ಇಂದಿಗೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಉತ್ತಮ ಪ್ರೌಢಶಾಲೆಯೆಂಬ ಪ್ರಸಿದ್ಧಿ ಹೊಂದಿದೆ. ಆ ಪಾಠಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು ದೇಶ ಸೇವೆ ಮಾಡುತ್ತಿದ್ದಾರೆ. ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದವರಿದ್ದಾರೆ.

ಗುರುದಾಸರು ಖಂಡಿತವಾದಿಗಳು; ಹಿಡಿದಕೆಲಸವನ್ನು ಬಿಡದೇ ಸಾಧಿಸುತ್ತಿದ್ದ ಛಲಗಾರರಾಗಿದ್ದರೂ ವಾತ್ಸಲ್ಯಮಯರು. ಇವರೊಬ್ಬ ಅದ್ಭುತ ಸಂಘಟನಾ ಚತುರರು ಮತ್ತು ಯೋಜಕರಾಗಿದ್ದರು. ವೇದಪಾಠಿಗಳಾಗಿದ್ದೂ ಅಲ್ಲದೆ ಉತ್ತಮ ಉಪನ್ಯಾಸಕಾರರೂ ಆಗಿದ್ದರು. 1962ರಿಂದ ಆಜೀವಪರ್ಯಂತ ಬಸರೀಕಟ್ಟೆಯ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀ ಕಾರ್ಯದರ್ಶಿಗಳಾಗಿದ್ದರು.

  

ಕೊನೆಯ ಬಾರಿ ಗುರುದಾಸರು ಬೆಂಗಳೂರಿಗೆ ಬಂದಿದ್ದಾಗ ವಿದ್ಯಾಶಾಲೆಯ ವಿದ್ಯಾರ್ಥಿಗಳೊಬ್ಬರ ಮನೆಗೆ ಬಂದಿದ್ದರು. ಆ ವಿದ್ಯಾರ್ಥಿಯ ತಂದೆಯವರೊಡನೆ ಇವರಿಗೆ ತುಂಬ ಗೆಳೆತನ. ಅವರು ಗುರುದಾಸರನ್ನು ಬೀಳ್ಕೊಡಲು ಹೋದಾಗ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯ ಸಾಲನ್ನು ತೋರಿಸಿ 'ರಾಮರಾಯರೇ, ಹಕ್ಕಿ ಹಾರುತಿದೆ ನೋಡಿದಿರಾ?' ಎಂದಿದ್ದರು. ರಾಮರಾಯರು ಅದು ಬೇಂದ್ರೆಯವರ ಕವನ' ಎಂದಿದ್ದರು. ಅದಕ್ಕೆ ಗುರುದಾಸರು 'ಎಲ್ಲಿ ಹಾರುತಿದೆ ನೋಡಿದಿರಾ?' ಎಂದಿದ್ದರು. ಇದಾದ ಕೆಲವು ದಿನಗಳ ನಂತರ ಗುರುದಾಸರು ಇಹಲೋಕವನ್ನು ತ್ಯಜಿಸಿ ಭಗವಂತನಪಾದಗಳನ್ನು ಸೇರಿದರು. ತಂಬೂರಿ ಮೀಟುತ್ತಲೇ ಭವಾಬ್ಧಿ ದಾಟಿಬಿಟ್ಟರು.